ಗುಂಡ್ಲುಪೇಟೆ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ಸದಸ್ಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಡಾ.ಅಜಯ್ ಕುಮಾರ್, ಅಜಯಕುಮಾರ್, ಮಧು, ಕೇಶವಮೂರ್ತಿ ಮತ್ತಿತರರಿದ್ದರು. 
ಚಾಮರಾಜನಗರ

ಗುಂಡ್ಲುಪೇಟೆ ತಾಲೂಕು ಬರಪೀಡಿತವೆಂದು ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ಸದಸ್ಯರ ಆಗ್ರಹ

ಗುಂಡ್ಲುಪೇಟೆ:

ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆಯ ವತಿಯಿಂದ ಬೃಹತ್ ಜಾಥಾ ನಡೆಸಲಾಯಿತು.

ಪಟ್ಟಣದ ಮೈಸೂರು ರಸ್ತೆಯಿಂದ ಜಾಥಾ ಹೊರಟ ಸದಸ್ಯರು, ತಾಲೂಕು ಕಚೇರಿ ಎದುರು ಸಮಾವೇಶಗೊಂಡರು.
ಸಂಸ್ಥೆಯ ಮುಖ್ಯಸ್ಥ ಡಾ.ಬಿ.ಎಸ್.ಅಜಯ್ ಕುಮಾರ್ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿನ ರೈತರು ಹಾಗೂ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ ಗಮನಕ್ಕೆ ಬಂದಿದೆ.

ಜಾನುವಾರುಗಳಿಗೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮಗಳ ಚರಂಡಿಗಳಲ್ಲಿ ಸ್ವಚ್ಛತೆ ಇಲ್ಲದೆ ಅನಾರೋಗ್ಯದ ಭೀತಿ ಎದುರಾಗಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಬರ ಪರಿಸ್ಥಿತಿಯಿಂದ ರೈತರು ಜೀವನ ನಿರ್ವಹಣೆಗಾಗಿ ಕೈ ಸಾಲ ಮಾಡಿಕೊಳ್ಳುತ್ತಿದ್ದು, ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವಂತಾಗಿದೆ. ಇದರಿಂದ ರೈತ ಕುಟುಂಬಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕೂಡಲೇ ರೈತ ಕುಟುಂಬಗಳಿಗೆ ತಕ್ಷಣ ಪರಿಹಾರ ಹಾಗೂ ಬರ ಪರಿಹಾರಕ್ಕಾಗಿ ಒತ್ತಾಯಿಸಿದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ವಿನೋದ್ ಅವರಿಗೆ ಸಲ್ಲಿಸಿದರು.

ಭಾಗ್ಯ ಅಜಯಕುಮಾರ್, ಮಧು, ಕೇಶವಮೂರ್ತಿ ಮತ್ತು ವಿವಿಧ ಗ್ರಾಮಗಳ ಮಹಿಳೆಯರು, ಗ್ರಾಮಸ್ಥರು ಹಾಗೂ ರೈತ ಸಂಘಟನೆ ಮುಖಂಡರು, ಸಂಸ್ಥೆಯ ಸಿಬ್ಬಂದಿ ಪಾಲ್ಗೊಂಡಿದ್ದರು.