ಗುಂಡ್ಲುಪೇಟೆಯ ಘನತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗಿದ್ದ ಕಸ ತೆರವುಗೊಳಿಸುವ ಕಾರ್ಯವನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸಿದರು. ಶರವಣ, ಮಂಜುನಾಥ್, ಮಹೇಶ್, ಸುಷ್ಮಾ ಇದ್ದರು.
ಗುಂಡ್ಲುಪೇಟೆ : ಪಟ್ಟಣದ ಪುರಸಭೆ ವ್ಯಾಪ್ತಿಯ ಶ್ರೀರಾಮದೇವರ ಗುಡ್ಡದ ಸಮೀಪದಲ್ಲಿರುವ ಹಳೆಯ ಕಸ ವಿಲೇವಾರಿ ಘಟಕದಲ್ಲಿ ಹಲವಾರು ವರ್ಷಗಳಿಂದ ಸಂಗ್ರಹವಾಗಿದ್ದ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ಪುರಸಭೆ ಅಧಿಕಾರಿಗಳು ಕ್ರಮಕೈಗೊಂಡರು.
ಪುರಸಭೆ ಮುಖ್ಯಾಧಿಕಾರಿ ಶರವಣ ಮಾತನಾಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಟೆಂಡರ್ ಕರೆಯಲಾಗಿದೆ. ಇಲ್ಲಿ ಸಂಗ್ರಹವಾಗಿರುವ ಸುಮಾರು 25 ಸಾವಿರ ಟನ್ ಹಳೆಯ ತ್ಯಾಜ್ಯವನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ವರ್ಗೀಕರಿಸಿ ವೈಜ್ಞಾನಿಕವಾಗಿ ಸಂಸ್ಕರಿಸಿ, ಮರುಬಳಕೆ ಮಾಡುವ ಪ್ರಕ್ರಿಯೆ ನಡೆಸಲಾಗುತ್ತದೆ. ಕಸದಿಂದ ಬೇರ್ಪಡಿಸಲಾದ ಗುಣಮಟ್ಟದ ಸಾವಯವ ಗೊಬ್ಬರವನ್ನು ಪಟ್ಟಣದ ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆಗೆ ಬಳಸಲಾಗುತ್ತಿದೆ. ಕಸದಿಂದ ಸಂಸ್ಕರಿಸಿದ ಮಣ್ಣನ್ನು ಅದೇ ಜಾಗದ ಫಲವತ್ತತೆ ಮತ್ತು ಮಣ್ಣಿನ ಪೋಷಕಾಂಶಗಳನ್ನು ವೃದ್ಧಿಸಲು ಮರುಬಳಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ಹಾಗೂ ಇತರ ದಹನ ಮಾಡಬಹುದಾದ ಮರುಬಳಕೆಗೆ ಬಾರದ ಒಣ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಇಂಧನವಾಗಿ ಬಳಸಲು ಸುರಕ್ಷಿತವಾಗಿ ರವಾನಿಸಲಾಗುತ್ತಿದೆ. ಇದರಿಂದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲಾಗುತ್ತದೆ. ಕಾಮಗಾರಿ ನಿರ್ವಹಿಸುತ್ತಿರುವ ಟೆಂಡರ್‌ದಾರ ನಿರ್ದಿಷ್ಟ ಅವಧಿಯೊಳಗೆ ಕೆಲಸ ಮುಗಿಸುವಂತೆ ಸೂಚಿಸಿದರು.
ಪುರಸಭೆಯ ಕಿರಿಯ ಇಂಜಿನಿಯರ್ ಮಂಜುನಾಥ್, ಪರಿಸರ ಇಂಜಿನಿಯರ್ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ ಮತ್ತಿತರರಿದ್ದರು.