ಗುಂಡ್ಲುಪೇಟೆ ಪಟ್ಟಣದಲ್ಲಿ ನಿರ್ಬಂಧ ಉಲ್ಲಂಘಿಸಿ ಶಾಲೆಗಳ ಸಮೀಪ ಸಂಚರಿಸುತ್ತಿದ್ದ ಟಿಪ್ಪರ್‌ಗಳನ್ನು ಪೊಲೀಸರು ವಶಕ್ಕೆ ಪಡೆದರು. 
ಚಾಮರಾಜನಗರ

ಸಂಚಾರ ನಿಯಮ ಉಲ್ಲಂಸಿದ ಆರು ಟಿಪ್ಪರ್ ವಶ

ಗುಂಡ್ಲುಪೇಟೆ: ಪಟ್ಟಣದ ಪೊಲೀಸರು ಕಾರ್ಯಾಚರಣೆ ನಡೆಸಿ ಶಾಲಾ-ಕಾಲೇಜು ಸಮಯದಲ್ಲಿ ಸಂಚಾರ ನಿರ್ಬಂಧಿಸಿದ್ದರೂ ನಿಯಮ ಉಲ್ಲಂಘಿಸಿ ಕಲ್ಲು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ತಾಲೂಕಿನ ಚಿಕ್ಕತುಪ್ಪೂರು ಸಮೀಪ ಶಾಲಾ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಗೆ ಪೆಟ್ಟು ಬಿದ್ದಿದ್ದ ಘಟನೆ ನಂತರ ಬೆಳಗ್ಗೆ 8ರಿಂದ 10.30 ಹಾಗೂ ಸಂಜೆ 3.30 ರಿಂದ 5.30ರವರೆಗೆ ಟಿಪ್ಪರ್, ದೊಡ್ಡ ಲಾರಿಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದ್ದು ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆದರೆ ಮಂಗಳವಾರ ಬೆಳಗ್ಗೆ 8.10 ಗಂಟೆಗೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿಯಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದ್ದಾನೇಶ್ವರ ಶಾಲೆ, ದೊಡ್ಡಹುಂಡಿ ಭೋಗಪ್ಪ ಕಿರಿಯ ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತರಗತಿಗೆ ಹೋಗುವ ಸಮಯದಲ್ಲಿ ನಿರ್ಬಂಧ ಉಲ್ಲಂಘಿಸಿ ಕಲ್ಲು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್‌ಗಳನ್ನು ಸರ್ಕಲ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್ ಹಾಗೂ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.