ಗುಂಡ್ಲುಪೇಟೆ: ಪಟ್ಟಣದ ಪುರಸಭೆಯಲ್ಲಿ ಗುರುವಾರ 2026-27ನೇ ಸಾಲಿನ 79 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಮುಖ್ಯಾಧಿಕಾರಿ ಸರವಣ ಮಂಡಿಸಿದರು.  
ಚಾಮರಾಜನಗರ

ಗುಂಡ್ಲುಪೇಟೆ ಪುರಸಭೆಯಲ್ಲಿ 79 ಲಕ್ಷ ರೂ. ಉಳಿತಾಯ ಬಜೆಟ್

ಪ್ರಮುಖ ಮುಖ್ಯಾಂಶಗಳು

  • ಆಯ-ವ್ಯಯ ಮಂಡಿಸಿದ ಮುಖ್ಯಾಧಿಕಾರಿ ಸರವಣ
ಗುಂಡ್ಲುಪೇಟೆ: ಪಟ್ಟಣದ ಪುರಸಭೆಯಲ್ಲಿ ಗುರುವಾರ 2026-27ನೇ ಸಾಲಿನ 79 ಲಕ್ಷ ರೂ. ಉಳಿತಾಯ ಬಜೆಟ್ ಅನ್ನು ಮುಖ್ಯಾಧಿಕಾರಿ ಸರವಣ ಮಂಡಿಸಿದರು.
ಪುರಸಭಾ ಆಡಳಿತಾಧಿಕಾರಿಯೂ ಆದ ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಸಮ್ಮುಖದಲ್ಲಿ ಆಯ-ವ್ಯಯ ಮಂಡಿಸಲಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಈಜುಕೊಳ, ಆಧುನಿಕ ಜಿಮ್, ಖಾಸಗಿ ಬಸ್ ನಿಲ್ದಾಣ, ಪ್ರವಾಸಿ ತಾಣಗಳನ್ನು ಗುರುತಿಸಲು ಡಿಜಿಟಲ್ ಟೂರಿಸಂ ಇನ್‌ಫಾರ್ಮೆಷನ್ ಬೋರ್ಡ್ ನಿರ್ಮಾಣ, ಊಟಿ-ಮೈಸೂರು ರಸ್ತೆಯಲ್ಲಿ ಫುಟ್‌ಪಾತ್ ಮತ್ತು ರ‌್ಯಾಲಿಂಗ್ಸ್ ಮುಂದುವರಿದ ಕಾಮಗಾರಿ, ಮುಖ್ಯ ರಸ್ತೆಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸೋಲಾರ್ ಪ್ಲಾಂಟ್, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಪುರಸಭೆ ಅಧಿಕಾರಿ, ನೌಕರರ ವಸತಿಗೃಹ ನಿರ್ಮಾಣ, ಆಟೋ ಟ್ಯಾಕ್ಸಿ ಪಾರ್ಕಿಂಗ್ ನಿರ್ಮಾಣ, ಶ್ರೀರಾಮ ದೇವರ ಗುಡ್ಡದ ಬಳಿ ಆಶ್ರಯ ಯೋಜನೆ ಬಡಾವಣೆಗೆ ಮೂಲಸೌಲಭ್ಯ, ಚಿಕ್ಕತುಪ್ಪೂರು ಗ್ರಾಮದ ಬಳಿ ಹೊಸ ಬಡಾವಣೆಗೆ ಮೂಲಸೌಲಭ್ಯ, ಹೊಸ ಬಡಾವಣೆ ಸಿಎ ನಿವೇಶನಗಳಲ್ಲಿ ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣ, ಕಸಾಯಿಖಾನೆಗೆ ಆಧುನಿಕ ಸಾಮಗ್ರಿಗಳ ಅಳವಡಿಕೆ ಮತ್ತು ಉನ್ನತೀಕರಣ ಸೇರಿ ಒಟ್ಟು 37.40 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆಗಳ ಅನುಷ್ಠಾನ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
7.50 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ಕಚೇರಿ ಕಟ್ಟಡ ನಿರ್ಮಾಣ, 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ನೈರ್ಮಲ್ಯ ವಾಹನ ಖರೀದಿ, ವಾಹನಗಳ ಬಾಡಿಗೆ, ಸಹಾಯಧನ, ಪೌರಕಾರ್ಮಿಕರ ಗೃಹ ಭಾಗ್ಯ, ಜಾಹೀರಾತು ಇನ್ನೂ ಹಲವು ಉದ್ದೇಶಗಳು ಸೇರಿ 33,11,81,500 ರೂ. ವೆಚ್ಚ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಆಸ್ತಿ ತೆರಿಗೆ, ದಂಡ, ಮಳಿಗೆಗಳ ಬಾಡಿಗೆ, ದಂಡ, ಕಟ್ಟಡ ಪರವಾನಗಿ, ಅಭಿವೃದ್ಧಿ ಮತ್ತು ಸುಧಾರಣೆ, ಉದ್ದಿಮೆ ಪರವಾನಗಿ ಶುಲ್ಕಗಳು, ನೀರಿನ ಶುಲ್ಕ ಇತರ ಮೂಲಗಳಿಂದ 5, 55,35,000 ರೂ. ಆದಾಯ ನಿರೀಕ್ಷಿಸಲಾಗಿದೆ.
ಎಸ್‌ಎಫ್‌ಸಿ ವೇತನ, ಮುಕ್ತನಿಧಿ ಮತ್ತು ವೇತನ ಅನುದಾನ, ನಲ್ಮ್, 15 ಮತ್ತು 16 ನೇ ಹಣಕಾಸು ಯೋಜನೆ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ, ಸ್ವಚ್ಛ ಭಾರತ್, ಅಮೃತ್-2 ಸೇರಿ ವಿವಿಧ ಯೋಜನೆಗಳಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 21, 54, 50,000 ರೂ.ಅನುದಾನ ನಿರೀಕ್ಷಿಸಲಾಗಿದೆ.
ಒಟ್ಟು 49,04,42,447 ರೂ. ಆದಾಯ ನಿರೀಕ್ಷಿಸಿದ್ದು, ಇದರಲ್ಲಿ 48,25,80,000 ರೂ. ವೆಚ್ಚ ಮಾಡಲು ಉದ್ದೇಶಿಸಿದ್ದು, 78,61, 947ರೂ. ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಕಂದಾಯಾಧಿಕಾರಿ ಸವಿತಾ, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ, ಪರಿಸರ ಇಂಜಿನಿಯರ್ ಮಹೇಶ್, ಹಿರಿಯ ಶ್ರೇಣಿ ಸಹಾಯಕ ಕಿರಣ್, ಲೆಕ್ಕಾಧಿಕಾರಿ ಹೇಮಾ, ನೌಕರರಾದ ಮೂರ್ತಿ, ಅನುಪಮಾ, ಗು.ಚಿ.ರಮೇಶ್, ಪುಟ್ಟಸ್ವಾಮಿ, ರವಿ, ಶಿವು ಇತರರು ಇದ್ದರು.