ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟದ ಹಿಮದಲ್ಲಿ ಪ್ರವಾಸಿಗರು ಮಿಂದೇಳುತ್ತಿದ್ದಾರೆ. 
ಚಾಮರಾಜನಗರ

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

ಗುಂಡ್ಲುಪೇಟೆ: ಸದಾಕಾಲ ಹಿಮದಿಂದ ಆವರಿಸಿ ತಾಲೂಕಿನ ಊಟಿ ಎಂದೇ ಕರೆಸಿಕೊಳ್ಳುವ ಪ್ರಸಿದ್ಧ ಪ್ರವಾಸಿ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಿತ್ವಾ ಚಂಡಮಾರುತದ ಪರಿಣಾಮ ಮತ್ತಷ್ಟು ಮಂಜಿನ ರಾಶಿ ಹೊದ್ದಿದ್ದು, ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.
ಕಾಡಿನಿಂದ ಹುಲಿಗಳು ಗ್ರಾಮಗಳತ್ತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬಂಡೀಪುರದಲ್ಲಿ ಸಫಾರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇದರಿಂದ ಹೆಚ್ಚಿನ ಪ್ರವಾಸಿಗರು ಹಿಮವದ್ ಗೋಪಾಲಸ್ವಾಮಿ ಬೆಟ್ಟದತ್ತ ಮುಖಮಾಡಿದ್ದಾರೆ. ಚಂಡಮಾರುತದ ಪರಿಣಾಮ ಕಳೆದ 3-4 ದಿನಗಳಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಂಜಿನ ಚಾದರ ದಟ್ಟವಾಗುತ್ತಿದೆ. ಬೆಟ್ಟ ಹಾಗೂ ದೇವಾಲಯದ ಆವರಣವೆಲ್ಲಾ ಮಂಜಿನಿಂದ ಆವರಿಸಿದ್ದು ಅಕ್ಕಪಕ್ಕದವರಿಗೂ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ಹಿಮಾವೃತಗೊಂಡಿದೆ. ಹಿಮದ ಜತೆಗೆ ತುಂತುರು ಮಳೆ ಬೀಳುತ್ತಿರುವುದು ವಿಶೇಷ ಅನುಭವ ನೀಡುತ್ತಿದೆ. ಚುಮುಚುಮು ಚಳಿ ಆನಂದ ಉಂಟು ಮಾಡುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.