ಸಂಚಾರ ಪೊಲೀಸ್ ಠಾಣೆ ನಿರ್ಮಿಸುವ ಸಂಬಂಧ ಪೊಲೀಸ್ ಅಧಿಕಾರಿಗಳ ಜತೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಚರ್ಚಿಸಿದರು. ಭೂ ನ್ಯಾಯಮಂಡಳಿ ಸದಸ್ಯ ಜಿ.ಜೆ.ಲೋಕೇಶ್, ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು. 
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಸಂಚಾರ ಠಾಣೆ ನಿರ್ಮಾಣಕ್ಕೆ ಚಿಂತನೆ

ಗುಂಡ್ಲುಪೇಟೆ: ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಪಟ್ಟಣಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಿದ್ದು, ಅದನ್ನು ಆರಂಭಿಸುವ ಸಂಬಂಧ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪೊಲೀಸ್ ಅಧಿಕಾರಿಗಳ ಜತೆ ಸ್ಥಳ ಪರಿಶೀಲಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದರು.
ಡಿವೈಎಸ್‌ಪಿ ಸ್ನೇಹಾರಾಜ್ ಮಾತನಾಡಿ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿಯೇ ಪ್ರತ್ಯೇಕ ಕಟ್ಟಡವಿದ್ದು ಅಗತ್ಯ ಪರಿಕರಗಳನ್ನು ಅಳವಡಿಸಲು ಸಾಕಷ್ಟು ಸ್ಥಳಾವಕಾಶವಿದೆ. ಆದರೆ ಸದ್ಯ ಪಟ್ಟಣದ ಪೊಲೀಸ್ ಠಾಣೆಗೆ ಅತಿ ಹೆಚ್ಚಿನ ದೂರುಗಳು ಬರುತ್ತಿವೆ. ಇದರಿಂದ ಠಾಣೆಯ ಆವರಣ ಸದಾಕಾಲ ಗಿಜಿಗುಡುತ್ತಿದೆ. ಅಲ್ಲದೆ ಪಟ್ಟಣದ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜತೆಗೆ ನಿಯಮ ಬಾಹಿರವಾಗಿ ಸಂಚರಿಸುವ ಟಿಪ್ಪರ್‌ಗಳನ್ನು ವಶಕ್ಕೆ ಪಡೆದರೆ ಒಳಗೆ ನಿಲ್ಲಿಸಲು ಸ್ಥಳಾವಕಾಶವಿಲ್ಲದೆ ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟ್ರಾಫಿಕ್ ಠಾಣೆಯನ್ನು ಇಲ್ಲೇ ತೆರೆದರೆ ಮತ್ತಷ್ಟು ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅದಕ್ಕೆ ಪ್ರತ್ಯೇಕ ಸ್ಥಳ ಗುರುತಿಸಿ ಅಲ್ಲಿ ನೂತನ ಕಟ್ಟಡ ನಿರ್ಮಿಸಿ ಟ್ರಾಫಿಕ್ ಠಾಣೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭೂ ನ್ಯಾಯಮಂಡಳಿ ಸದಸ್ಯ ಜಿ.ಜೆ.ಲೋಕೇಶ್, ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.