ಯಳಂದೂರು ಪಟ್ಟಣದಲ್ಲಿ ಬುಧವಾರ ತಾಲೂಕು ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಒಂದು ದಿನದ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಗೌಡಹಳ್ಳಿ ರವಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. 
ಚಾಮರಾಜನಗರ

ಸರ್ಕಾರದ ಸೌಲಭ್ಯ ಪಡೆದು ಉತ್ತಮ ಬೆಳೆ ಬೆಳೆಯಿರಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ ಹೇಳಿಕೆ
  • ಒಂದು ದಿನದ ಕಾರ್ಯಾಗಾರ
ಯಳಂದೂರು: ರೈತರು ಹಾಗೂ ಕೃಷಿ ಇಲಾಖೆ ನಡುವೆ ಕೃಷಿಕ ಸಮಾಜ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಬುಧವಾರ ತಾಲೂಕು ಕೃಷಿಕ ಸಮಾಜದ ವತಿಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಇಲಾಖೆಯಿಂದ ಲಭಿಸುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಭೂಮಿಯನ್ನು ಹಸನುಗೊಳಿಸಿಕೊಳ್ಳಬೇಕು. ಹೆಚ್ಚು ಇಳುವರಿ ಪಡೆಯಲು, ಇಲಾಖೆಯಿಂದ ಲಭಿಸುವ ಸೂಕ್ತ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬೇಕು, ಬೆಳೆ ವಿಮೆ, ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಂಡು ಅಧಿಕ ಇಳುವರಿ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕೃಷಿಕ ಸಮಾಜದ ವತಿಯಿಂದ ರೈತ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಇದರ ಸದಸ್ಯರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರು ತಮ್ಮ ಭೂಮಿಗಳನ್ನು ಹೊರ ರಾಜ್ಯ, ಜಿಲ್ಲೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಿಸಬೇಕು. ತಾವು ಬೆಳೆದ ಬೆಳೆಗಳಿಂದ ಇತರೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಇಂದು ಹೊರ ದೇಶಗಳ ಹಿಡಿತದಲ್ಲಿ ನಮ್ಮ ಕೃಷಿ ಕೈ ಜಾರುವ ಅಪಾಯವಿದೆ. ಅಕ್ಕಿ, ಗೋಧಿ ಹೊರತುಪಡಿಸಿ ಧಾನ್ಯಗಳು, ಎಣ್ಣೆ ಕಾಳುಗಳು, ಸಾಂಬಾರ ಪದಾರ್ಥಗಳನ್ನು ನಾವು ಬೇರೆ ದೇಶಗಳಿಂದ ಅಮದು ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ನಮ್ಮನ್ನಾಳುವ ಸರ್ಕಾರಗಳು ನಮ್ಮನ್ನು ಬೀದಿಗೆ ತರಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸುಕಿನ ಜೋಳವನ್ನು ಅಮದು ಮಾಡಿಕೊಳ್ಳುವ ಮಾತುಕತೆ ನಡೆಯುತ್ತಿದ್ದಂತೆಯೇ ನಮ್ಮಲ್ಲಿ ಬೆಳೆಯುವ ಮುಸುಕಿನ ಜೋಳದ ಬೆಲೆ ಕುಸಿತ ಕಂಡು ಬಂದಿದೆ. ಒಂದು ವೇಳೆ ಆಮದಾದರೆ ಮತ್ತಷ್ಟು ಅಪಾಯವಿದೆ. ನಮ್ಮಲ್ಲಿ ಶೇ.60 ರಷ್ಟು ರೈತರು ಇದ್ದಾರೆ. ಅಮೆರಿಕಾದಲ್ಲಿ ಶೇ.1ರಷ್ಟು, ಯುರೋಪ್ ರಾಷ್ಟ್ರಗಳಲ್ಲಿ ಶೇ.4ರಷ್ಟು ರೈತರಿದ್ದಾರೆ. ಅವರು ಸಾವಿರಾರು ಎಕರೆ ಜಮೀನನ್ನು ಹೊಂದಿದ್ದಾರೆ. ಅವರು ನಮ್ಮ ಜಮೀನ್ನು ಖರೀದಿಸಿ ನಮಗೆ ಕೆಲಸ ಇಲ್ಲದಂತೆ ಮಾಡಿ, ನಮ್ಮ ಮೇಲೆ ಸವಾರಿ ಮಾಡುವ ಹಂತಕ್ಕೆ ಹೋದರೆ ನಾವು ಮತ್ತೆ ಗುಲಾಮಗಿರಿಗೆ ಹೋಗುವ ಅಪಾಯವಿದೆ. ಭೂಮಿಗೆ ರಾಸಾಯನಿಕಗಳನ್ನು ಸುರಿದು ಇದನ್ನು ಬರಡು ಮಾಡುವ ಅಪಾಯವಿದೆ. ನಾವು ನಮ್ಮ ಭೂಮಿಯನ್ನು ಉಳಿಸಿಕೊಂಡು, ನಮ್ಮಲ್ಲಿ ಬೆಳೆದ ಉತ್ಪನ್ನಗಳಿಂದ ಇತರೆ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಅಧಿಕ ಲಾಭಗಳಿಸುವತ್ತ ತಮ್ಮ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಸ್ವಾಮಿ, ರಾಜ್ಯ ಪ್ರತಿನಿಧಿ ರಾಘವೇಂದ್ರ ನಾಯ್ಡು, ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಖಜಾಂಚಿ ರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮೃತೇಶ್ವರ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೌಡಹಳ್ಳಿ ಸೋಮಣ್ಣ, ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ ನಿರ್ದೇಶಕರಾದ ನಾಗೇಂದ್ರಸ್ವಾಮಿ, ಕೆಸ್ತೂರು ನಟರಾಜು, ಬಸವಣ್ಣ, ಗೋವಿಂದನಾಯಕ ಜಯಶಂಕರ, ಸಿದ್ದರಾಜು, ಶಾಂತಮೂರ್ತಿ, ನಾಗರಾಜು ಸೇರಿದಂತೆ ಅನೇಕರು ಇದ್ದರು.