ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್ ಕುಮಾರ್
- ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್ ಕುಮಾರ್ ಪ್ರತಿಕ್ರಿಯೆ
ಕೊಳ್ಳೇಗಾಲ: ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ 12 ಸಾವಿರ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಉಡುತೊರೆ ಹಳ್ಳ ಯೋಜನೆಗೆ 490 ಕೋಟಿ ರೂ.ಅನುದಾನ ಘೋಷಿಸಿರುವುದು ಸ್ವಾಗತಾರ್ಹ ಎಂದು ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಹನೂರು ವಿಧಾನಸಭಾ ಕ್ಷೇತ್ರದ ರೈತರು ಕೃಷಿಗಾಗಿ ಮಳೆಯನ್ನೇ ಆಶ್ರಯಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣವು ಕಡಿಮೆ ಯಾಗುತ್ತಿರುವ ಫಲವಾಗಿ ಕೃಷಿಯನ್ನು ತೊರೆದು ಜೀವನ ನಿರ್ವಹಣೆಗೋಸ್ಕರ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಿರುವ ನೀರಿನ ಸೌಲಭ್ಯವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಿರುವ 490 ಕೋಟಿ ರೂ.ಅನುದಾನದಿಂದಾಗಿ 22 ಹಳ್ಳಿಗಳಿಗೆ ಹಾಗೂ 12,000 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲಮಟ್ಟ ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.