ಗೋಪಿನಾಥಂ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಮಹೇಂದ್ರ, ಸಿನ್ನಣ್ಣನ್, ಮಂಜೇಶ್, ಕುಪ್ಪುಸ್ವಾಮಿ ಇತರರಿದ್ದರು.
ಹನೂರು: ಗೋಪಿನಾಥಂ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಆಸ್ಪತ್ರೆ ಕಟ್ಟಡದ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ದೊರಕಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಗಡಿ ಗೋಪಿನಾಥಂ ಗ್ರಾಮದಲ್ಲಿ ಭಾನುವಾರ 3 ಕೋಟಿ ರೂ. ವೆಚ್ಚದಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಅಗತ್ಯ ಸೌಕರ್ಯ ಹಾಗೂ ವೈದ್ಯ, ಸಿಬ್ಬಂದಿ ಕೊರತೆಯಿಂದ ಈ ಭಾಗದ ಕಾಡಂಚಿಲ್ಲಿರುವ 15ಕ್ಕೂ ಹೆಚ್ಚು ಗ್ರಾಮದ ಜನರು ಉತ್ತಮ ಆರೋಗ್ಯ ಸೇವೆ ಸಿಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಗ್ರಾಮದಲ್ಲಿ ಹೊಸ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದರೂ ಸಾಧ್ಯವಾಗಿರಲಿಲ್ಲ. ಇದೀಗ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಈ ಕಟ್ಟಡದಲ್ಲಿ ವೈದ್ಯರ ಕೊಠಡಿ, ಹೊರ ರೋಗಿ ವಿಭಾಗ, ಚುಚ್ಚುಮದ್ದು ಕೊಠಡಿ, ಪ್ರತ್ಯೇಕ ಪುರುಷ ಹಾಗೂ ಮಹಿಳಾ ವಿಭಾಗ, ಪ್ರಯೋಗಾಲಯ, ಔಷಧಾಲಯ, ಹೆರಿಗೆ ಕೊಠಡಿ, ಕಚೇರಿ, ಯುಪಿಎಸ್, ಸೋಲಾರ್, ಸೆಪ್ಟಿಕ್ ಹಾಗೂ ಓವರ್‌ಹೆಡ್ ಸೌಕರ್ಯದ ವ್ಯವಸ್ಥೆ ಇರಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ದೊರಕಲಿದೆ. ಇದರಿಂದ ಈ ಭಾಗದ ಜನರು ಹನೂರು ಹಾಗೂ ಕೊಳ್ಳೇಗಾಲದ ಆಸ್ಪತ್ರೆಗೆ ತೆರಳುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜವಾಬ್ದಾರಿ ಹೊತ್ತವರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಮಹೇಂದ್ರ, ಅರಣ್ಯ ಇಲಾಖೆಯ ಆರ್‌ಎಫ್‌ಒ ಗುರುಮೂರ್ತಿ, ಡಿಆರ್‌ಎಫ್‌ಒ ರಾಜಶೇಖರಮೂರ್ತಿ, ಪಿಡಬ್ಲ್ಯುಡಿ ಎಇಇ ಸಿನ್ನಣ್ಣನ್, ಎಇ ಸಂತೋಷ್, ಮುಖಂಡರಾದ ಮಂಜೇಶ್, ಮಣಿ, ನಾಗರಾಜು, ಜಯರಾಮರೆಡ್ಡಿ, ಪಳನಿ, ಪೆರುಮಾಳ್, ಗೋವಿಂದರಾಜು, ಕುಪ್ಪುಸ್ವಾಮಿ ಗೌಂಡರ್, ಶ್ರೀನಿವಾಸ್, ಮುರುಗನ್ ಹಾಗೂ ಇನ್ನಿತರರಿದ್ದರು.