ಭೈರನತ್ತ ಡಿ.ಎಂ.ಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಸೋಮಶೇಖರ್, ನಾಗೇಂದ್ರಬಾಬು, ಕುಮಾರ್, ರಾಜು, ವಾಲೆ ಮಹದೇವ ಇತರರು ಇದ್ದರು.
ಅಧಿಕಾರಿಗಳು ಗುಣಮಟ್ಟ ಸಂಬಂಧ ನಿಗಾ ವಹಿಸಲು ಶಾಸಕ ಸೂಚನೆ
ಹನೂರು: ತಾಲೂಕಿನ ಭೈರನತ್ತ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯ ಕನಸು ಡಿ.ಎಂ. ಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ಸೇತುವೆ ನಿರ್ಮಾಣಕ್ಕೆ ಕಾಯಕಲ್ಪ ಕೂಡಿಬಂದಿದ್ದು, ಭಾನುವಾರ ಶಾಸಕ ಎಂ.ಆರ್.ಮಂಜುನಾಥ್ ಅವರು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಭೈರನತ್ತದಿಂದ ಡಿ.ಎಂ.ಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ತಟ್ಟೆಹಳ್ಳವಿದ್ದು, ಮಳೆಗಾಲದ ವೇಳೆ ಯಥೇಚ್ಛವಾದ ನೀರು ಹರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ತೂಬು ಅಳವಡಿಸಿರಲಿಲ್ಲ. ಇದರಿಂದ ಮಳೆಗಾಲದ ವೇಳೆ ಹೆಚ್ಚಿನ ನೀರು ಕಿರು ಸೇತುವೆ ಮೇಲೆ ಹಲವು ದಿನಗಳವರೆಗೆ ಹರಿಯುತ್ತಿದ್ದು, ಪಾಚಿಗಟ್ಟುತ್ತಿತ್ತು. ಇದರಿಂದ ಡೇರಿಗೆ ಹಾಲು ಹಾಕಲು ತೆರಳುತ್ತಿದ್ದ ಬೈಕ್ ಸವಾರರು ಹಾಗೂ ಜನರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಿತ್ತು. ಜತೆಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ 7 ವರ್ಷಗಳಿಂದ ಗ್ರಾಮಸ್ಥರು ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಸಲ್ಲಿಸುತ್ತಲೇ ಇದ್ದರು. ಆದರೆ ಸಮಸ್ಯೆ ಬಗೆಹರಿಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ಸಹ ನಡೆಸಿದ್ದರು. ಈ ಬಗ್ಗೆ ಶಾಸಕ ಎಂ.ಆರ್.ಮಂಜುನಾಥ್ ಅವರು ಅಗತ್ಯ ಕ್ರಮವಹಿಸಿದ್ದರು. ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಹಾಗೂ ಶಾಸಕರು ಅವರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇತುವೆ ನಿರ್ಮಿಸುವ ಅಗತ್ಯತೆಯನ್ನು ಮನಗಂಡು 2.94 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ತಯಾರಿಸಿ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿತ್ತು. ಇದೀಗ ಪ್ರಾಧಿಕಾರದ ವಿಪತ್ತು ಉಪಶಮನ ನಿಧಿಯಿಂದ ಅನುದಾನ ಬಿಡುಗಡೆಯಾಗಿದ್ದು, ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಹಲವು ವರ್ಷಗಳ ಬೇಡಿಕೆ ಕನಸು ಈಡೇರಿದಂತಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ.
ಗುಣಮಟ್ಟ ಕಾಯ್ದುಕೊಳ್ಳಿ: ಭೂಮಿಪೂಜೆ ನೆರವೇರಿಸಿದ ಬಳಿಕ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸೇತುವೆ ನಿರ್ಮಾಣವಾಗಬೇಕು ಎನ್ನುವ ಭೈರನತ್ತ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಇದೀಗ ಕಾಲ ಕೂಡಿ ಬಂದಿದ್ದು, 2.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿ ಅವರು ಮುತುವರ್ಜಿ ವಹಿಸಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಸೇತುವೆ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಎದುರಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜವಾಬ್ದಾರಿ ಹೊತ್ತವರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ 6 ತಿಂಗಳೊಳಗೆ ಪೂರ್ಣಗೊಳಿಸಬೇಕು. ಗ್ರಾಮಸ್ಥರು ಸಹಕಾರ ನೀಡಬೇಕು. ಅಧಿಕಾರಿಗಳು ಗುಣಮಟ್ಟ ಸಂಬಂಧ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ ಸಿಸಿ ರಸ್ತೆ, ಶಾಲಾ ಕಾಂಪೌಂಡ್, ಶೌಚಗೃಹ ಹಾಗೂ ತಟ್ಟೆಹಳ್ಳದಲ್ಲಿ ಚೆಕ್‌ಡ್ಯಾಮ್ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಗಳ ಗಮನಕ್ಕೆ ತಂದು ಅಗತ್ಯ ಸೌಕರ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಸೋಮಶೇಖರ್, ಜಿಪಂ ಮಾಜಿ ಸದಸ್ಯ ನಾಗೇಂದ್ರಬಾಬು, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಚಪ್ಪ, ಎಇಇ ಕುಮಾರ್, ಗುತ್ತಿಗೆದಾರ ವಾಲೆ ಮಹದೇವ, ಮುಖಂಡರಾದ ರಾಜು, ಲೋಕೇಶ್, ಶಿವಸ್ವಾಮಿ, ನಿಂಗರಾಜು, ಮಾದೇಶ್, ಶಂಭುಲಿಂಗ ಹಾಗೂ ಇನ್ನಿತರರು ಇದ್ದರು