ಚಾಮರಾಜನಗರದ ಯಡಪುರ ಸರ್ಕಲ್ ಬಳಿಯ ಜಾಗದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಭೂಮಿಪೂಜೆ ನೆರವೇರಿಸಿದರು. ಸುತ್ತೂರು ಶ್ರೀಗಳು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಇತರರು ಇದ್ದರು.
- ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಭಾಗಿ
- ಜಿಲ್ಲೆಯ ಮೂವರು ಶಾಸಕರಿಂದ ಭೂಮಿ ಪೂಜೆ
ಚಾಮರಾಜನಗರ: ನಗರದ ಯಡಪುರ ಸರ್ಕಲ್ ಸಮೀಪದ ಜಾಗದಲ್ಲಿ ಜೆಎಸ್‌ಎಸ್ ಸಂಸ್ಥೆಗಳ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯವು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಗುರುವಾರ ಜಿಲ್ಲೆಯ ಮೂವರು ಶಾಸಕರು ಭೂಮಿಪೂಜೆ ನೆರವೇರಿಸಿದರು.
ಯಡಪುರ ಸರ್ಕಲ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಎದುರು ಇರುವ ಭೂಮಿಯಲ್ಲಿ ಜೆಎಸ್‌ಎಸ್ ಸಂಸ್ಥೆಯ ಪಬ್ಲಿಕ್ ಸ್ಕೂಲ್, ನರ್ಸಿಂಗ್ ಸ್ಕೂಲ್, ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಹೆಲ್ತ್‌ಸೈನ್ಸ್‌ನ ಕಾಲೇಜು ಮತ್ತು ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಸುತ್ತೂರು ಶ್ರೀಗಳು ಸಾನಿಧ್ಯವಹಿಸಿದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.
ಒಟ್ಟು 49 ಎಕರೆ ಪ್ರದೇಶದಲ್ಲಿ ಬೃಹತ್ ಕಟ್ಟಡ ಮೇಲೇಳಲಿದೆ. ಬಹು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 70 ಕೋಟಿ ರೂ.ವೆಚ್ಚವಾಗುತ್ತಿದೆ. ಚಾಮರಾಜನಗರ ಪ್ರದೇಶದಲ್ಲಿ ಈ ಶೈಕ್ಷಣಿಕ ಸಂಸ್ಥೆಗಳ ಸಮುಚ್ಛಯ ನಿರ್ಮಾಣವು ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ. ಎರಡು ವರ್ಷಗಳ ಅವಧಿಯಲ್ಲಿ ಕಟ್ಟಡ ಪೂರ್ಣಗೊಂಡು ಸೇವೆಗೆ ಸಮರ್ಪಣೆಯಾಗುವ ನಿರೀಕ್ಷೆ ಇದೆ.
ಕಟ್ಟಡದ ಭೂಮಿ ಪೂಜೆ ಬಳಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಪಾರ ಭಕ್ತರಿಗೆ ಸುತ್ತೂರು ಶ್ರೀಗಳು ಹಣ್ಣು ಕೊಟ್ಟು ಆಶೀರ್ವಾದ ಮಾಡಿದರು. ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಗ್ರಾಮೀಣ ಪ್ರದೇಶಗಳಿಂದ ಬಸ್‌ಗಳಲ್ಲಿ ಜನರು ಬಂದಿದ್ದರು. ವಿವಿಧ ಮಠಗಳ ಮಠಾಧೀಶರು ಭೂಮಿಪೂಜೆಯಲ್ಲಿ ಪಾಲ್ಗೊಂಡರು.