ವಿವಾಹ ಆರಕ್ಷತೆಗೆ ತೆರಳುವಾಗ ಚಾಕು ಇರಿತಕೊಳಗಾಗಿದ್ದ ರವೀಶ್ ಅವರನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಪ್ರಭು ಪ್ರಸಾದ್, ರಮೇಶ್, ಮಂಜುನಾಥ್, ತೋಟೇಶ್ ಇದ್ದರು.
- ಗಾಯಾಳುವಿಗೆ ಧೈರ್ಯ ತುಂಬಿದ ಶಾಸಕ ಎಆರ್‌ಕೆ
ಕೊಳ್ಳೇಗಾಲ: ವಿವಾಹ ಆರಕ್ಷತೆಗೆ ತೆರಳುವಾಗ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ವರನನ್ನು ಭಾನುವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಧೈರ್ಯ ತುಂಬಿದರು.
ತಾಲೂಕಿನ ಕುಣಗಳ್ಳಿ ಗ್ರಾಮದ ನಿವಾಸಿ ಎಲ್.ರವೀಶ್ ಕಳೆದ ಮೂರು ದಿನದ ಹಿಂದಷ್ಟೇ ಪಟ್ಟಣದ ವೆಂಕಟೇಶ್ವರ ಮಹಲ್‌ನಲ್ಲಿ ನಿಗದಿಯಾಗಿದ್ದ ತನ್ನ ವಿವಾಹ ಆರತಕ್ಷತೆಗೆ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿ ಚಾಕುವಿನಿಂದ ಹಲ್ಲೆ ಮಾಡಿದ್ದರು. ಇದ್ದರಿಂದ ರವೀಶ್ ಗಾಯಗೊಂಡು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರಿಂದ ವಿವಾಹ ಕೂಡ ಮುರಿದು ಬಿದ್ದ ಹಿನ್ನೆಲೆಯಲ್ಲಿ ನನಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಬಳಿಕ ಕುಣಗಳ್ಳಿ ಗ್ರಾಮದ ಮನೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ರವೀಶ್‌ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಘಟನೆಯ ಮಾಹಿತಿ ಪಡೆದು ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ರವೀಶ್ ಮೇಲೆ ಹಲ್ಲೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಆತನ ಕುಟುಂಬಕ್ಕೆ ಮೊದಲ ಹಂತದ ನ್ಯಾಯ ಸಿಕ್ಕಿದೆ. ಆದರೆ, ಈ ವಿಚಾರವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಕಾನ್‌ಸ್ಟೇಬಲ್ ಹಾದಿಯಾಗಿ ಉನ್ನತ ಪೊಲೀಸ್ ಅಧಿಕಾರಿಗಳು ಗೌರವಯುತವಾಗಿ ಕೆಲಸ ಮಾಡುತ್ತಿದ್ದಾರೆ. ಯಾರೇ ಅದರೂ ಈ ವಿಚಾರದಲ್ಲಿ ಮಾತನಾಡಬೇಕಾದರೂ ತಿಳಿದು ಮಾತನಾಡಬೇಕು. ಈಗಾಗಲೇ ವಿಧಾನಸಭೆಯಲ್ಲೂ ಪಿಎಸ್‌ಐಗಳಿಗೆ ವಾರಕೊಮ್ಮೆ ರಜೆ ನೀಡಬೇಕಾಗಿ ಮನವಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಯಳಂದೂರು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಪ್ರಭು ಪ್ರಸಾದ್, ಕೊಳ್ಳೇಗಾಲ ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಮಾಜಿ ಸದಸ್ಯರಾದ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕುಣಗಳ್ಳಿ ಮಾಜಿ ಗ್ರಾ.ಪಂ.ಸದಸ್ಯ ಚಂದ್ರಶೇಖರ್, ಯಜಮಾನರಾದ ನಂಜುಂಡ ಸ್ವಾಮಿ, ಕುಮಾರ್ ಇತರರಿದ್ದರು.