ಹನೂರಿಗೆ ಆಗಮಿಸಿದ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಅವರನ್ನು ಮುಖಂಡರು ಸನ್ಮಾನಿಸಿದರು. ಬಸವರಾಜು, ಸುದೇಶ್, ಚೇತನ್, ಮಾದೇಶ್ ಇತರರಿದ್ದರು.
ಹನೂರು: ತಾಲೂಕಿನ ಸಮುದಾಯದ ಜನರಿಗೆ ನಿಗಮದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಭರವಸೆ ನೀಡಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಸೋಮವಾರ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದೆ ಹನೂರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಇಲ್ಲಿನ ಸಮಸ್ಯೆ ನನಗೆ ತಿಳಿದಿದೆ. ಸಮುದಾಯದ ಜನರನ್ನು ಸಬಲೀಕರಣಗೊಳಿಸಬೇಕಿದೆ. ಹಾಗಾಗಿ ಈ ಬಗ್ಗೆ ಮುಖಂಡರೊಡನೆ ಚರ್ಚಿಸಿ ನಿಗಮದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಇದೇ ವೇಳೆ ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಹನೂರು ಕ್ಷೇತ್ರದಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಡತನ ವರ್ಗಕ್ಕೆ ಸೇರಿದ್ದಾರೆ. ಆದರೆ ನಿಗಮದಿಂದ ಸವಲತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಆದ್ದರಿಂದ ಈ ಭಾಗದ ಜನರಿಗೆ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಸದಸ್ಯ ಸುದೇಶ್, ಹನೂರು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ರಾಮಾಪುರ ಬ್ಲಾಕ್ ಅಧ್ಯಕ್ಷ ರಮೇಶ್, ಮುಖಂಡರಾದ ಚೇತನ್, ಪ್ರಸನ್ನಕುಮಾರ್, ಶೇಖರ್ ಇದ್ದರು.