ಅಭಿವೃದ್ಧಿಗಾಗಿ ಕಾಯುತ್ತಿರುವ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲ 
ಚಾಮರಾಜನಗರ

ದೇಗುಲ ಅಭಿವೃದ್ಧಿಗೆ ಅನುದಾನ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮುಜರಾಯಿ ಇಲಾಖೆಯಿಂದ 3 ವರ್ಷದಲ್ಲಿ 63.82 ಲಕ್ಷ ರೂ.
  • ದಿವ್ಯಲಿಂಗೇಶ್ವರ ಸನ್ನಿಧಿಯ ಗೋಪುರ ನಿರ್ಮಾಣ ಕಾಮಗಾರಿ ಶುರುವಾಗುವುದು ಯಾವಾಗ?
ಚಾಮರಾಜನಗರ: ತಾಲೂಕಿನಲ್ಲಿರುವ ದೇಗುಲಗಳು ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ಜೀರ್ಣೋದ್ಧಾರವಾಗುತ್ತಿವೆಯೇ..?
ಈ ಪ್ರಶ್ನೆಗೆ ರಾಜ್ಯ ಮುಜರಾಯಿ ಇಲಾಖೆ ನೀಡಿರುವ ಉತ್ತರವೇನೆಂದರೆ, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ದೇಗುಲಗಳ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ 63.82 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವುದಾಗಿದೆ. ರಾಜ್ಯ ಮುಜರಾಯಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2022-23ರಿಂದ 2024-25ನೇ ಸಾಲಿನವರೆಗೆ ಅಂದರೆ ಒಟ್ಟು 3 ವರ್ಷಗಳಲ್ಲಿ ದೇಗುಲಗಳ ದುರಸ್ತಿ, ಜೀರ್ಣೋದ್ಧಾರ, ನಿರ್ಮಾಣಕ್ಕಾಗಿ 15 ಲಕ್ಷ ರೂ., ಆರಾಧಾನ ಯೋಜನೆಯಡಿ 8.92 ಲಕ್ಷ ರೂ., ಪರಿಶಿಷ್ಟ ಜಾತಿ ಉಪ ಯೋಜನೆಯಡಿ 8.92 ಲಕ್ಷ ರೂ., ಗಿರಿಜನ ಉಪ ಯೋಜನೆಯಡಿ 2.16 ಲಕ್ಷ ರೂ., ಅನುಸೂಚಿನ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ ಇದರಡಿ ಪರಿಶಿಷ್ಟ ಜಾತಿ ಉಪಯೋಜನೆಗೆ 11.57 ಲಕ್ಷ ರೂ., ಅನುಸೂಚಿನ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತದ ಗಿರಿಜನ ಉಪಯೋಜನೆಗೆ 17.25 ಲಕ್ಷ ರೂ., ಸೇರಿ ಒಟ್ಟು 63.82 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಈ ಅನುದಾನಕ್ಕಿಂತ ಹೆಚ್ಚಿನ ಹಣವನ್ನು ವಿವಿಧ ಗ್ರಾಮಗಳ ದೇವಸ್ಥಾನಗಳಿಗೆ ನೀಡಿರುವುದಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಇದರಲ್ಲಿ ಸರ್ಕಾರದ ಅನುದಾನದ ಜತೆಗೆ ವೈಯಕ್ತಿಕವಾಗಿ ನೀಡಿರುವ ಕಾಣಿಕೆಯೂ ಸೇರಿಕೊಂಡು ದೇವಸ್ಥಾನಗಳ ಅಭಿವೃದ್ಧಿ ಕಾಣುತ್ತಿವೆ.
‘ಎ’ ಗ್ರೇಡ್ ದೇಗುಲಗಳಿಲ್ಲ:
ಮುಜರಾಯಿ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳ ದೇವಸ್ಥಾನಗಳನ್ನು ಅವುಗಳಿಗೆ ಬರುವ ಆದಾಯದ ಮೇಲೆ ಎ, ಬಿ ಮತ್ತು ಸಿ ಗ್ರೇಡ್ ಆಧಾರದಲ್ಲಿ ಗುರುತಿಸುತ್ತದೆ. ಆದರೆ ಚಾಮರಾಜನಗರ ತಾಲೂಕಿನಲ್ಲಿ ಎ ಗ್ರೇಡ್ ದೇವಸ್ಥಾನಗಳಿಲ್ಲ. ಕ್ಷೇತ್ರದಲ್ಲಿ ಇತಿಹಾಸ ಪ್ರಸಿದ್ಧ ದೇಗುಲಗಳಿವೆ. ಶ್ರೀಚಾಮರಾಜೇಶ್ವರ ಊರಿನ ದೈವವಾಗಿದ್ದು, ವರ್ಷಕ್ಕೆ ಒಂದು ಸಲ ಆಷಾಢ ಮಾಸದಲ್ಲಿ ವಿಜೃಂಭಣೆಯ ರಥೋತ್ಸವ ನಡೆಯುತ್ತದೆ. ಆದರೂ ಈ ದೇವಸ್ಥಾನದ ಎ ಗ್ರೇಡ್‌ಗೆ ಸೇರಿಲ್ಲ ಬದಲಾಗಿ ಬಿ ಗ್ರೇಡ್‌ಗೆ ಸೇರಿದೆ. ಜಿಲ್ಲೆಯಲ್ಲಿ ಒಟ್ಟು 2 ಎ ಗ್ರೇಡ್ ದೇವಸ್ಥಾನಗಳಿವೆ. ಇವು ಯಳಂದೂರಿನ ಬಿಳಿಗಿರಂಗನಾಥ ಸ್ವಾಮಿ ದೇವಸ್ಥಾನ, ಕೊಳ್ಳೇಗಾಲದ ಶಿವನಸಮುದ್ರದ ದೇಗುಲಗಳಾಗಿವೆ. 2 ಬಿ ಗ್ರೇಡ್ ದೇಗುಲಗಳಿದ್ದು, ಚಾಮರಾಜನಗರದ ಶ್ರೀಚಾಮರಾಜೇಶ್ವರ ಮತ್ತು ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನವಾಗಿದೆ. ಉಳಿದಂತೆ 272 ಸಿ ಗ್ರೇಡ್ ದೇವಸ್ಥಾನಗಳಿವೆ. ರಾಜ್ಯ ಸರ್ಕಾರದಿಂದ 63.82 ಲಕ್ಷ ರೂ. ಅನುದಾನ ಚಾಮರಾಜನಗರ ತಾಲೂಕು ವ್ಯಾಪ್ತಿಯ ಬಿ ಮತ್ತು ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆಯಾಗಿದೆ. ಶಾಸಕರ ನಿಧಿ ಅಥವಾ ವಿಶೇಷ ಅನುದಾನಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಒದಗಿಸುವ ಅನುದಾನವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೆಆರ್‌ಐಡಿಎಲ್, ನಿರ್ಮಿತಿ ಕೇಂದ್ರಗಳು ದೇವಾಲಯಗಳ ಅಭಿವೃದ್ಧಿ ಕಾಮಗಾರಿಗಳ ಬಿಲ್‌ಗಳಲ್ಲಿ ವಿಧಿಸುವ ಶಾಸನ ಬದ್ಧ ತೆರಿಗೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲ.
ದಿವ್ಯಲಿಂಗೇಶ್ವರ ದೇಗುಲ ಅಭಿವೃದ್ಧಿ ಯಾವಾಗ?:
ತಾಲೂಕಿನ ಹರದನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀದಿವ್ಯಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ಕಾಯುತ್ತಿದೆ. ವಿಜಯನಗರ ಸಾಮ್ರಾನ್ಯದ ಶ್ರೀಕೃಷ್ಣದೇವರಾಯ ತನ್ನ ವಿಜಯದ ಸ್ಮರಣಾರ್ಥ ಕ್ರಿ.ಶ.1511ರಲ್ಲಿ ಈ ದೇವಾಲಯವನ್ನು ನಿರ್ಮಿಸಿದರು. ಬಳಿಕ ಮೈಸೂರು ಅರಸರು ದೇಗುಲವನ್ನು ಪೋಷಿಸಿದ್ದರು. ಈ ರೀತಿ ಮಹತ್ವದ ಇತಿಹಾಸ ಹೊಂದಿರುವ ದೇವಸ್ಥಾನ ಹಳೆಯದಾಗಿದೆ. ಇದನ್ನು ಮನಗಂಡಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ರಾಜ್ಯ ಸರ್ಕಾರದಿಂದ ದೇಗಲದ ಅಭಿವೃದ್ಧಿಗೆ ಸುಮಾರು 3.62 ಕೋಟಿ ರೂ. ಅನುದಾನ ತಂದಿದ್ದಾರೆ. ಈ ಅನುದಾನದಲ್ಲಿ ಗೋಪುರ ಮರು ನಿರ್ಮಾಣವಾಗಲಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಈಗಾಗಲೇ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದಾರೆ. ಆದರೆ ಇನ್ನೂ ನಿರ್ಮಾಣ ಕಾರ್ಯ ಶುರುವಾಗಿಲ್ಲ. ಕಾಮಗಾರಿಯನ್ನು ಬೇಗ ಶುರು ಮಾಡಬೇಕೆಂದು ಭಕ್ತರು ಒತ್ತಾಯ ಮಾಡುತ್ತಿದ್ದಾರೆ.
"

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ದೇವಸ್ಥಾನಗಳ ಅಭಿವೃದ್ಧಿಗಾಗಿ ಅನುದಾನ ತಂದಿದ್ದೇನೆ. ಮುಜರಾಯಿ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೀಡಿರುವ 63.82 ಲಕ್ಷ ರೂ.ಗಳ ಮಾಹಿತಿಯಲ್ಲಿ ಯಾವ ಯಾವ ದೇಗುಲಗಳಿಗೆ ನೀಡಿದೆ ಎಂದು ತಿಳಿಸಬೇಕಾಗಿದೆ. ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನದ ಗೋಪುರ ಕಾಮಗಾರಿ ಕೆಲಸವನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದ್ದು, ತಮಿಳುನಾಡು ವಾಸ್ತುಶಿಲ್ಪ ಶೈಲಿಯಲ್ಲಿ ಗೋಪುರ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

— ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ