ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಹಾಗೂ ಮಹಿಳಾ ಗ್ರಾಮಸಭೆಯಲ್ಲಿ ಪಿಡಿಒ ಬಸವಣ್ಣ ಮಾತನಾಡಿದರು. ಅಧ್ಯಕ್ಷೆ ಪುಟ್ಟಮಾಧವಿ ಇತರರು ಇದ್ದರು. 
ಚಾಮರಾಜನಗರ

ಮೈಕ್‌ಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ಮನವಿ

ಎ. ಆರ್. ರಘುರಾಮ
ಯಳಂದೂರು:ಪರೀಕ್ಷಾ ಸಮಯದಲ್ಲಿ ನಡೆಯುವ ಜಾತ್ರೆ, ಉತ್ಸವಗಳ ಮೈಕ್ ಅಬ್ಬರಕ್ಕೆ ಕಡಿವಾಣ ಹಾಕಿ ಎಂದು ವಿದ್ಯಾರ್ಥಿಗಳು ಗ್ರಾಪಂ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಹಮ್ಮಿ ಕೊಂಡಿದ್ದ ಮಕ್ಕಳ ಹಾಗೂ ಮಹಿಳಾ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.
ಜೋರಾಗಿ ಮೈಕ್ ಹಾಕಿದರೆ ಏಕಾಗ್ರತೆಗೆ ಧಕ್ಕೆಯಾಗುತ್ತದೆ. ಓದಲು ತೊಂದರೆಯಾಗುತ್ತದೆ. ಹಾಗಾಗಿ ಕ್ರಮ ಅಗತ್ಯವಾಗಿದೆ ಎಂದರು.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಇದು ವಿದ್ಯಾರ್ಥಿಗಳಿಗೆ ಮುಜುಗರ ಮೂಡಿಸುತ್ತಿದೆ. ಇದಕ್ಕೂ ನಿಯಂತ್ರಣ ಹೇರಬೇಕು. ನಮ್ಮ ಶಾಲೆಯ ಮೈದಾನವನ್ನು ಅಭಿವೃದ್ಧಿಗೊಳಿಸಬೇಕು. ಇನ್ನಷ್ಟು ಶೌಚಗೃಹಗಳ ನಿರ್ಮಾಣವಾಗಬೇಕು. ಕೊಮಾರನಪುರ, ಗಣಿಗನೂರು ಸೇರಿದಂತೆ ಇತರೆ ಗ್ರಾಮಗಳಿಂದ ಗುಂಬಳ್ಳಿಗೆ ಬರಲು ಕೆಸ್ಸಾರ್ಟಿಸಿ ವತಿಯಿಂದ ಬಸ್‌ಗಳ ಸೌಲಭ್ಯವನ್ನು ಒದಗಿಸಬೇಕು ಎಂದು ಮಕ್ಕಳು ಮನವಿ ಮಾಡಿದರು.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವಿವರ ನೀಡಿದರು. ಸೂಕ್ತ ಕ್ರಮ ವಹಿಸುವ ಭರವಸೆಯನ್ನೂ ಮಕ್ಕಳಿಗೆ ನೀಡಿದರು. ನಂತರ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಪಿಡಿಒ ಬಸವಣ್ಣ ಮಾಹಿತಿ ನೀಡಿ, ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ವಿಧವೆಯರು, ಅವಿವಾಹಿತರು, ಸೇರಿದಂತೆ ಹಲವು ಮಾನದಂಡಗಳಲ್ಲಿ ಮಹಿಳೆಯರನ್ನು ಗುರುತಿಸಿ ಅವರು ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಹಲವು ಯೋಜನೆಗಳು ಜಾರಿಗೆ ಬಂದಿವೆ ನಮ್ಮ ಪಂಚಾಯಿತಿಯಿಂದ 4 ಗ್ರಾಮಗಳಲ್ಲಿ ಬಡತನದಲ್ಲಿರುವ 74 ಮಹಿಳೆಯರನ್ನು ಗುರುತಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಪುಟ್ಟಮಾಧವಿ, ಸದಸ್ಯರಾದ ಬಸವರಾಜು, ನಟರಾಜು, ಚಂದ್ರಶೇಖರ್ ಪಶು ಇಲಾಖೆಯ ಬಸವರಾಜು, ಸಿಆರ್‌ಪಿ ರೇಚಣ್ಣ, ಮುಖ್ಯ ಶಿಕ್ಷಕ ನಿಂಗೇಗೌಡ, ಶಿಕ್ಷಕರಾದ ವೀರಭದ್ರಸ್ವಾಮಿ, ಕುಮಾರಸ್ವಾಮಿ, ಪಿಎಂಎಸ್‌ಆರ್ ಸಂಸ್ಥೆಯ ಆಡ್ರಿಸ್ ಅರ್ನಾಲ್ಡ್, ಮುಖಂಡರಾದ ಚಿಕ್ಕಣ್ಣ, ವೆಂಕಟರಾಜು, ಕೃಷ್ಣಮೂರ್ತಿ, ಕಿಟ್ಟಿ, ಗೋವಿಂದ ಇದ್ದರು.