ಗುಂಡ್ಲುಪೇಟೆ ಪಟ್ಟಣದಲ್ಲಿ ಬಸವಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೀರಗಾಸೆ ಕಲಾವಿದರು. ಹಳ್ಳಿಕಾರ್ ತಳಿಯ ಹೋರಿಗಳು, ಬಸವೇಶ್ವರರ ಕಂಚಿನ ಪುತ್ಥಳಿ ಹಾಗೂ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಮೆರವಣಿಗೆ
ಗುಂಡ್ಲುಪೇಟೆ : ಅಖಿಲ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಮತ್ತು ಯುವ ಘಟಕ, ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಗುಂಡ್ಲುಪೇಟೆ ಬಸವ ಜಯಂತಿ ಉತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಅಲಂಕೃತ ವಾಹನದ ಮೇಲೆ ಮಂಟಪದ ಮೇಲಿರಿಸಿದ್ದ ಬಸವೇಶ್ವರರ ಕಂಚಿನ ಮೂರ್ತಿಗೆ ಮಹಾಸಭಾದ ಗೌರವಾಧ್ಯಕ್ಷ ಸಿದ್ದಮಲ್ಲ ಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿಎಸ್.ನಿರಂಜನಕುಮಾರ್, ತಾಲೂಕಿನ ಪಡಗೂರು ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಹಂಗಳದ ಜಡೇಸ್ವಾಮೀಜಿ, ಮೂಡಗೂರಿನ ಇಮ್ಮಡಿ ಉದ್ದಾ ಸ್ವಾಮೀಜಿ, ಗೋಪಾಲಪುರದ ಗಂಗಾಧರಸ್ವಾಮೀಜಿ, ಹಂಗಳದ ಷಡಕ್ಷರಸ್ವಾಮೀಜಿ, ಇಮ್ಮಡಿ ಮಹಾಂತಸ್ವಾಮೀಜಿ, ನಂಜುಂಡಸ್ವಾಮೀಜಿ, ಮಾದಾಪಟ್ಟಣದ ತೋಂಟದಾರ್ಯಸ್ವಾಮೀಜಿ, ಕಬ್ಬಹಳ್ಳಿಯ ಗುರುಸಿದ್ದಸ್ವಾಮೀಜಿ, ಚನ್ನವೀರಸ್ವಾಮೀಜಿ, ಇಮ್ಮಡಿ ಶಾಂತಮಲ್ಲಸ್ವಾಮೀಜಿ, ಬಸವಣ್ಣ ಸ್ವಾಮೀಜಿ, ಸಿದ್ದೇಶ್ವರಸ್ವಾಮಿ ಮುಂತಾದ ಶ್ರೀಗಳು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಾನಾ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ, ಅಂತಾರಾಷ್ಟ್ರೀಯ ಪ್ರಿಸ್ಟಿ ಕ್ರೀಡಾ ಸ್ಪರ್ಧಿ ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.
ಮಡಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಆಗಮಿಸಿದ ಮೆರವಣಿಗೆ ಅಶ್ವಾರೂಢ ಬಸವೇಶ್ವರರ ಕಂಚಿನ ಮೂರ್ತಿ ಜತೆಗೆ ನಂದಿಧ್ವಜ, ವೀರಗಾಸೆ, ಡೊಳ್ಳು, ನಗಾರಿ, ಮಂಗಳವಾದ್ಯ, ಕಂಸಾಳೆ ಮೊದಲಾದ ಜನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹಳ್ಳಿಕಾರ್ ಸೇರಿದಂತೆ ನಾನಾ ತಳಿಯ ಹೋರಿಗಳನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಯೊಂದಿಗೆ ಸಾಗಿದ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಸಾವಿರಾರು ಯುವಕರು ವಾದ್ಯಗಳ ಶಬ್ದಕ್ಕೆ ತಕ್ಕಂತೆ ಕುಣಿದರು.
ಮಳೆಯ ಸಿಂಚನ, ನೀರು ಮಜ್ಜಿಗೆ ವಿತರಣೆ:
ಮೆರವಣಿಗೆ ಸಾಗುತ್ತಿದ್ದಂತೆ ಸಣ್ಣದಾಗಿ ಬಿದ್ದ ಮಳೆಯ ಸಿಂಚನ ಬಿಸಿಲಿನ ತಾಪಕ್ಕೆ ಸ್ವಲ್ಪಮಟ್ಟಿಗೆ ತಂಪೆರೆಯಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಅಂಗಡಿ ಬೀದಿಯಲ್ಲಿ ವ್ಯಾಪಾರಿಗಳು ಮಜ್ಜಿಗೆ, ನೀರು ವಿತರಣೆ ಮಾಡಿದರು.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಆಯೋಜಿಸಲಾಗಿತ್ತು. ಮಹಾಸಭಾ ವತಿಯಿಂದ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಾವಿರಾರು ಜನರಿಗೆ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.