ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಗ್ರಾಮದ ಮಾರಮ್ಮನವರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. 
ಚಾಮರಾಜನಗರ

ಕಳಸಾರೋಹಣ ಹಾಗೂ ಅಂಕಸ್ಥಾಪನಗೆ ಸಿದ್ದತೆ

ಎ. ಆರ್. ರಘುರಾಮ
ಗುಂಡ್ಲುಪೇಟೆ : ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಮಾರಮ್ಮನವರ ದೇವಾಲಯದಲ್ಲಿ ಪ್ರತಿಷ್ಟಾಪನೆ, ಕಳಸಾರೋಹಣ ಹಾಗೂ ಅಂಕಸ್ಥಾಪನಗೆ ಸಿದ್ದತೆ ನಡೆಸಲಾಗುತ್ತಿದೆ.
ಈ ಅಂಗವಾಗಿ ಜ 18ರ ಭಾನುವಾರ, 19ರ ಸೋಮವಾರ ಹಾಗೂ 20 ರ ಮಂಗಳವಾರ ನಾನಾ ಧಾರ್ಮಿಕ ವಿಧಿ ವಿಧಾನಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಗ್ರಾಮದ ಬೀದಿಗಳನ್ನು ಶುಚಿಗೊಳಿಸಿ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿದೆ.
21 ರ ಬುಧವಾರದಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಧಾರ್ಮಿಕ ಸಭೆಯಲ್ಲಿ ಪಡಗೂರು ಅಡವಿ ಮಠಾಧ್ಯಕ್ಷರಾದ ಶಿವಲಿಂಗೇಂದ್ರಸ್ವಾಮೀಜಿ, ದೇವನೂರು ಮಠಾಧ್ಯಕ್ಷರಾದ ಮಹಾಂತಸ್ವಾಮೀಜಿ, ಮೂಡುಗೂರು ಮಠಾಧ್ಯಕ್ಷರಾದ ಇಮ್ಮಡಿ ಉದ್ದಾನೇಶ್ವರಸ್ವಾಮೀಜಿ, ಹಂಗಳ ಹಳ್ಳದ ಮಠಾಧ್ಯಕ್ಷರಾದ ಜಡೇಸ್ವಾಮೀಜಿ, ಸೋಮಹಳ್ಳಿ ಮಠಾಧ್ಯಕ್ಷರಾದ ಸಿದ್ದಮಲ್ಲಸ್ವಾಮೀಜಿ ಸೇರಿದಂತೆ ಜಿಲ್ಲೆಯ ಹಲವಾರು ಮಠಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮುಂದಾಗಿರುವ ಗ್ರಾಮಸ್ಥರು ತಮ್ಮ ಮನೆಮಠಗಳನ್ನು ಶುಚಿಗೊಳಿಸಿ ಬೇರೆ ಊರುಗಳಲ್ಲಿರುವ ತಮ್ಮ ಬಂಧುಬಾಂಧವರನ್ನು ಆಹ್ವಾನಿಸುತ್ತಿದ್ದಾರೆ. ಹೊರಗಿನಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.