ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಿನೊಳಗೆ ನಿರ್ಮಿಸಿರುವ ಫೈರ್ ಲೈನ್‌ಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಹುಲ್ಲುಸುಡುವ ಕಾಮಗಾರಿ ನಿರ್ವಹಿಸುತ್ತಿರುವುದು.
ಗುಂಡ್ಲುಪೇಟೆ : ಬೇಸಿಗೆ ಸಂದರ್ಭದಲ್ಲಿ ಬಂಡೀಪುರವನ್ನು ಆಕಸ್ಮಿಕ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ. ಕಳೆದ ತಿಂಗಳು ಅರಣ್ಯ ಪ್ರದೇಶದ ಒಳಗೆ ನಿಗದಿತ ಪ್ರದೇಶಗಳಲ್ಲಿ ಫೈರ್ ಲೈನ್ ಹಾಗೂ ರಸ್ತೆ ಬದಿಗಳಲ್ಲಿ ವ್ಯೆ ಲೈನ್ ಕಾಮಗಾರಿ ಆರಂಭಿಸಿ ಎಲ್ಲಾ ವಲಯಗಳಲ್ಲಿಯೂ ಪೂರ್ಣಗೊಳಿಸಲಾಗಿದೆ. ಸದ್ಯ ಎರಡು ಹೆದ್ದಾರಿ ಬದಿಗಳಲ್ಲಿ ಹಾಗೂ ಅರಣ್ಯ ಪ್ರದೇಶದೊಳಗೆ ನಿರ್ಮಿಸಿರುವ ಫೈರ್ ಲೈನ್‌ಗಳಲ್ಲಿ ಹುಲ್ಲು ಸುಡುವ ಕಾರ್ಯ ಆರಂಭಿಸಲಾಗಿದೆ. ಇದು ಶೀಘ್ರವೇ ಪೂರ್ಣಗೊಳ್ಳಲಿದೆ.
ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ನಿರ್ಲಕ್ಷ್ಯದಿಂದ ಅರಣ್ಯಕ್ಕೆ ಬೆಂಕಿ ಬೀಳುವ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೆದ್ದಾರಿಗಳ ಬದಿಗಳಲ್ಲಿ ಒಣಹುಲ್ಲು ಸುಡುವ ಕಾರ್ಯಕೈಗೊಂಡಿದೆ. ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರಿನಿಂದ ಮೂಲೆಹೊಳೆವರೆಗೆ, ತಮಿಳುನಾಡು ರಸ್ತೆಯ ಮೇಲು ಕಾಮನಹಳ್ಳಿಯಿಂದ ಕೆಕ್ಕನಹಳ್ಳದವರೆಗೆ ರಸ್ತೆ ಬದಿಗಳಲ್ಲಿ ತೆರವುಗೊಳಿಸಿದ್ದ ಗಿಡ ಗಳನ್ನು ಅರಣ್ಯ ಸಿಬ್ಬಂದಿ ಸುಡುವ ಕಾರ್ಯ ಮಾಡುತ್ತಿದೆ. ಇದೇ ಸಂದರ್ಭ ಬೆಂಕಿ ಅತ್ತಿತ್ತ ಕಾಡಿಗೆ ಹರಡದಂತೆ ಸ್ಪ್ರೇಯರ್ ಮೂಲಕ ನೀರು ಸಿಂಪಡಿಸಿ ನಿಯಂತ್ರಿಸಲಾಗುತ್ತಿದೆ.
ಅರಣ್ಯ ಇಲಾಖೆ ಈ ಬಾರಿಯೂ ಬಂಡೀಪುರಕ್ಕೆ ಬೆಂಕಿಬೀಳದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಈಗಾಗಲೇ ಎಲ್ಲಾ 13 ವಲಯಗಳಲ್ಲಿ 2,800 ಕಿಮೀ ಉದ್ದಕ್ಕೂ ಲಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್ ಲೈನ್ ನಿರ್ಮಾಣ ಮಾಡಲಾಗಿದೆ. ಜನವರಿ ಆರಂಭದಿಂದಲೇ ಫೈರ್ ವಾಚರ್ ನೇಮಕ ಮಾಡಿಕೊಳ್ಳಲಾಗಿದೆ. 2 ಸಾವಿರ ಕಿಮೀ ಪ್ರದೇಶದಲ್ಲಿ ಕಳೆಗಳನ್ನು ಸುಡಲಾಗಿದೆ. ಈ ಬಾರಿ ಆಗಾಗ ತುಂತುರುಮಳೆಬಿದ್ದ ಹಿನ್ನೆಲೆಯಲ್ಲಿ ತೆರವುಗೊಳಿಸಿದ ಕಳೆ ಹಾಗೂ ಹುಲ್ಲು ಒಣಗಿರಲಿಲ್ಲ. ಹಾಗಾಗಿ ಕಳೆ ಸುಡುವ ಕಾರ್ಯ ವಿಳಂಬವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೇಸಿಗೆಯಲ್ಲಿ ಬೆಂಕಿ ಆಕಸ್ಮಿಕ ತಪ್ಪಿಸಲು ಬಂಡೀಪುರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.13 ವಲಯಗಳಲ್ಲಿಯೂ ಅಗತ್ಯಪ್ರಮಾಣದ ಫೈರ್ ವಾಚರ್ ಗಳ ನೇಮಕ ಮಾಡಿಕೊಳ್ಳಲಾಗಿದೆ.
ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕರು.