ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಿರ್ಮಿಸಿರುವ ನೂತನ ಹತ್ತಿ ಮಾರುಕಟ್ಟೆಯು ಉದ್ಘಾಟನೆಗೆ ಸಿದ್ಧವಾಗಿರುವುದು.  
ಚಾಮರಾಜನಗರ

ಉದ್ಘಾಟನೆಗೆ ಸಿದ್ಧವಾಗಿದೆ ಹತ್ತಿ ಮಾರುಕಟ್ಟೆ

ಎ. ಆರ್. ರಘುರಾಮ
ಗುಂಡ್ಲುಪೇಟೆ : ತಾಲೂಕಿನ ಬೇಗೂರು ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 6.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹತ್ತಿ ಮಾರುಕಟ್ಟೆ ಸೇವೆಗೆ ಸಿದ್ಧವಾಗಿದೆ. ಮುಂಬರುವ ದಿನಗಳಲ್ಲಿ ಈ ಭಾಗದ ಹತ್ತಿ ಬೆಳೆಗಾರರಿಗೆ ಪ್ರಮುಖ ವಹಿವಾಟು ಕೇಂದ್ರವಾಗಲಿದ್ದು, ಶೀಘ್ರವೇ ಉದ್ಘಾಟನೆಗೊಳ್ಳುವ ಹಂತದಲ್ಲಿದೆ.
ಹೆಚ್ಚಾಗಿ ಹತ್ತಿ ಬೆಳೆಯುವ ಹೆಗ್ಗಡದೇವನಕೋಟೆ, ನಂಜನಗೂಡು ಹಾಗೂ ಗುಂಡ್ಲುಪೇಟೆ ಮೂರು ತಾಲೂಕುಗಳ ಬೆಳೆಗಾರರಿಗೆ ಅನುಕೂಲವಾಗುವಂತೆ ಬೇಗೂರಿನಲ್ಲಿ ಹತ್ತಿ ಮಾರುಕಟ್ಟೆ ತೆರೆಯಲು ಬೇಗೂರು ಗ್ರಾಮದ ಹೊರವಲಯದಲ್ಲಿ 10 ಎಕರೆ ಭೂಮಿಯನ್ನು ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಗುರುತಿಸಿದ್ದರು.
ಕಂದಾಯ ಇಲಾಖೆಯ ವಶದಲ್ಲಿದ್ದ ಭೂಮಿಯ ಹಸ್ತಾಂತರ ಹಾಗೂ ಭೂಪರಿವರ್ತನೆ ಸೇರಿದಂತೆ ನಾನಾ ಪ್ರಕ್ರಿಯೆಗಳು ನಡೆದಿದ್ದರೂ ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ಮಾರುಕಟ್ಟೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ನಂತರ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಮಹದೇವಪ್ರಸಾದ್
ಅವರ ಪತ್ನಿ ಗೀತಾ ಮಹದೇವಪ್ರಸಾದ್ ಮಾರುಕಟ್ಟೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದರೂ
ಸಾಧ್ಯವಾಗಿರಲಿಲ್ಲ. ಸಾರ್ವತ್ರಿಕ ಚುನಾವಣೆ ಘೋಷಣೆಯಾಯಿತು. ಸ್ಪರ್ಧೆ ಮಾಡಿದ್ದ ಗೀತಾ
ಪರಾಭವಗೊಂಡರು. ನಂತರ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ಸಿ.ಎಸ್.ನಿರಂಜನಕುಮಾರ್ ಅಂದಿನ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಬೇಗೂರಿಗೆ ಕರೆತಂದು ಮಾರುಕಟ್ಟೆ ನಿರ್ಮಾಣಕ್ಕೆ 6 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಕೋರಿದ್ದರೂ
ಸಾಧ್ಯವಾಗಿರಲಿಲ್ಲ. ನಂತರ ಎದುರಾದ ವಿಧಾನಸಭಾ ಚುನಾವಣೆ ಕಾರಣದಿಂದ ಕಾಮಗಾರಿ ಮತ್ತೊಮ್ಮೆ ನನೆಗುದಿಗೆ ಬಿದ್ದಿತ್ತು.
ಮೊದಲ ಬಾರಿಗೆ ಶಾಸಕರಾದ ಎಚ್.ಎಂ.ಗಣೇಶ್‌ಪ್ರಸಾದ್ ತಮ್ಮ ತಂದೆಯ ಕನಸನ್ನು ನನಸು ಮಾಡಲು ಮುಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದು 2024ರ ಜ. 3ರಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಫಲವಾಗಿ ಬೇಗೂರಿನ ಹತ್ತಿ ಮಾರುಕಟ್ಟೆ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ವಿಶಾಲವಾದ ರಸ್ತೆ, ಮುಚ್ಚಿದ ಹರಾಜುಕಟ್ಟೆ, ಆಡಳಿತ ಕಚೇರಿ, ಶೌಚಗೃಹ, ಸಿಸಿ ಚರಂಡಿ ಹಾಗೂ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ಮತ್ತು ರೈತರಿಗೆ ಕುಡಿಯುವ ನೀರಿನ ಸಂಪರ್ಕ ಸಹ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಇದು ಸೇವೆಗೆ ಸಮರ್ಪಣೆಯಾಗಲು ಸಿದ್ಧ್ದವಾಗಿದೆ.
*
ಹೆಚ್ಚಾಗಿ ಹತ್ತಿ ಬೆಳೆಯುವ ಪ್ರದೇಶಗಳು
ಕಡಿಮೆ ಮಳೆ, ಯಾವುದೇ ನಿರ್ವಹಣೆ ವೆಚ್ಚ ಬಯಸದೇ ಬೆಳೆಯುವ ಹತ್ತಿಯನ್ನು ತಾಲೂಕಿನ ಬೇಗೂರು ಹೋಬಳಿ, ನೆರೆಯ ಸರಗೂರು, ಹೆಗ್ಗಡದೇವನಕೋಟೆ ಹಾಗೂ ನಂಜನಗೂಡು ತಾಲೂಕಿನ ಹೆಡಿಯಾಲ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ಮಳೆಯಾಶ್ರಿತ ಬೆಳೆಯಾದ ಹತ್ತಿಗೆ ಪ್ರತಿ ವರ್ಷವೂ ಉತ್ತಮ ಬೆಲೆ ದೊರಕುತ್ತಿದ್ದರೂ ಈ
ಭಾಗದಲ್ಲಿ ಕೃಷಿಕರಿಗೆ ಸಮೀಪದ ಮಾರುಕಟ್ಟೆಯ ಸಮಸ್ಯೆ ತೀವ್ರವಾಗಿತ್ತು.
ಇದರಿಂದ ಹತ್ತಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಬೇಗೂರು ಗ್ರಾಮಕ್ಕೆ ಕೊಂಡೊಯ್ದು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ವ್ಯಾಪಾರಿಗಳು ಬೆಳೆಗಾರರ ಮನೆ ಮನೆಗಳಿಗೆ ಹೋಗಿ ಹತ್ತಿ ಖರೀದಿಸುವುದರಿಂದ ಅವರು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುವುದು
ಒಂದು ರೀತಿ ಅನಿವಾರ್ಯವೂ ಆಗಿತ್ತು. ಈ ಸಂದರ್ಭದಲ್ಲಿ ಬಹುತೇಕ ತೂಕ ಮತ್ತು ಬೆಲೆಯಲ್ಲಿ
ಬೆಳೆಗಾರರಿಗೆ ಮೋಸವಾಗುವುದೇ ಹೆಚ್ಚಾಗಿತ್ತು.
ಪ್ರತಿಬಾರಿಯೂ ಬೆಳೆಗಾರರು ಕಡಿಮೆ ಬೆಲೆಗೆ ಹತ್ತಿ ಮಾರಾಟ ಮಾಡುವಂತಾಗಿತ್ತು. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಸಮರ್ಪಕ ಬೆಲೆ ದೊರಕದೆ ಕೃಷಿಕರು ನಷ್ಟಕ್ಕೊಳಗಾಗುತ್ತಿದ್ದರು.
ಈ ಹಿನ್ನೆಲೆಯಲ್ಲಿ ಬೇಗೂರಿನಲ್ಲಿ ಹತ್ತಿಮಾರುಕಟ್ಟೆ ಸ್ಥಾಪನೆ ಮಾಡುತ್ತಿರುವುದು ಬೆಳೆಗಾರರಿಗೆ ವರದಾನವಾಗುವ ಭರವಸೆ ಮೂಡಿಸಿದೆ. ಪಟ್ಟ ಶ್ರಮಕ್ಕೆ ನಿಖರವಾದ ಮೌಲ್ಯವೂ ದೊರಕಲಿದೆ ಎಂಬ ಆಶಾವಾದ ರೈತ ಸಮೂಹದಲ್ಲಿ ಚಿಗುರಿದೆ.
ಬಾಕ್ಸ್
ಸದ್ಯ ಕಾರ್ಮಿಕರ ಕೊರತೆಯಿಂದ ಹತ್ತಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಹಾಗಿದ್ದರೂ ತಾಲೂಕಿನ ಸುಮಾರು 4,800 ಹೆಕ್ಟೇರ್ ಪ್ರದೇಶದಲ್ಲಿ 40 ಸಾವಿರ ಕ್ವಿಂಟಾಲ್, ನಂಜನಗೂಡು ಮತ್ತು ಹೆಗ್ಗಡದೇವನ ಕೋಟೆಗಳ 15 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ 60 ರಿಂದ 70 ಸಾವಿರ ಕ್ವಿಂಟಾಲ್ ಬೆಳೆಗಳಿಗೆ ಇದು ಉತ್ತಮ ಮಾರುಕಟ್ಟೆಯಾಗಲಿದೆ. ಇಲ್ಲಿಯೂ ಇ-ಟೆಂಡರ್ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸಿ ಬೆಳೆಗಾರರಿಗೆ ಆಗುತ್ತಿರುವ ಶೋಷಣೆ ತಪ್ಪಿಸಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ಶ್ರೀಧರ್ ವಿಜಯವಾಣಿಗೆ ತಿಳಿಸಿದ್ದಾರೆ.
*
ಶಾಸಕನಾದ ನಂತರ ಸರ್ಕಾರದಿಂದ ಅನುದಾನ ತಂದು ಹತ್ತಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ
ಆದ್ಯತೆ ನೀಡಿದೆ. ಈ ಮೂಲಕ ಸಚಿವ ದಿ. ಮಹದೇವಪ್ರಸಾದ್ ಅವರ ಕನಸನ್ನು ನನಸು
ಮಾಡುವ ಪ್ರಯತ್ನ ಮಾಡಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಕರೆಸಿ ಮಾರುಕಟ್ಟೆ ಉದ್ಘಾಟಿಸುವ ಯೋಜನೆ ಇದೆ.
> ಎಚ್.ಎಂ.ಗಣೇಶ್ ಪ್ರಸಾದ್
ಶಾಸಕ