ಗುಂಡ್ಲುಪೇಟೆ ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವವೈವಿಧ್ಯ ಸಂರಕ್ಷಣಾ ಕಾರ್ಯಕ್ರಮ ಆರ್.ಕೆ.ಮಧು ಉದ್ಘಾಟಿಸಿದರು. ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಗುಂಡ್ಲುಪೇಟೆ: ಸರ್ಕಾರ ವನ್ಯಜೀವಿ ಧಾಮಗಳನ್ನು ತೆರೆದು ನಶಿಸುತ್ತಿರುವ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ಪಟ್ಟಣದ ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವವೈವಿಧ್ಯ ಸಂರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾವೇ ಸೆರೆಹಿಡಿದ ವನ್ಯಜೀವಿ ಪಾರದರ್ಶಿಕೆ ಪ್ರದರ್ಶಿಸಿ ಪರಿಸರದಲ್ಲಿ ಜೀವವೈವಿಧ್ಯದ ವಿಶೇಷ ಮಹತ್ವ ಹಾಗೂ ವನ್ಯಜೀವಿ ಧಾಮಗಳ ಹಲವು ವಿಶೇಷವನ್ನು ವಿವರಿಸಿದರು. ಕರ್ನಾಟಕ ಹಲವು ವಿಶೇಷ ವನ್ಯಜೀವಿಧಾಮಕ್ಕೆ ಹೆಸರು ವಾಸಿಯಾಗಿದೆ. ಸಿಂಗಲೀಕಗಳ ಉಳಿವಿಗೆ ಸೋಮೆಶ್ವರ ವನ್ಯಜೀವಿ ಧಾಮವಿದ್ದರೆ, ರಣಹದ್ದುಗಳಿಗಾಗಿ ರಾಮದೇವರ ಬೆಟ್ಟ, ಕರಡಿಗಳಿಗಾಗಿ ಧರೋಜಿ ವಿಶೇಷವಾಗಿವೆ. ಇವು ಪರಿಸರ ಸಮತೋಲನಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಇತ್ತೀಚೆಗೆ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ನಿರ್ಮಿಸಲು ಉದ್ದೇಶಿಸಿರುವ ಸುರಂಗಮಾರ್ಗ ಪರಿಸರ ನಾಶಕ್ಕೆ ಕಾರಣವಾಗುವ ಜತೆಗೆ ಕಾಡಿನ ಅವನತಿಗೆ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.