ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ಸಫಾರಿ ಆರಂಭ ವಿರೋಧಿಸಿ ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡರಾದ ಮಂಜು ಕಿರಣ್, ವಕೀಲ ರವಿಕುಮಾರ್, ಷಣ್ಮುಖ ಸ್ವಾಮಿ, ಮಹೇಶ್ ಬರಗಿ ಇತರರು ಇದ್ದರು.  
ಚಾಮರಾಜನಗರ

ಬಂಡೀಪುರದಲ್ಲಿ ಸಫಾರಿಗೆ ಅನುಮತಿ ‘ಜಟಾಪಟಿ‘

ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಫಾರಿ ಆರಂಭಿಸಲು ಸರ್ಕಾರ ಅನುಮತಿ ನೀಡಿರುವ ವಿಚಾರ ಪರ-ವಿರೋಧ ಚರ್ಚೆ ನಡುವೆ ಜಟಾಪಟಿಗೂ ಕಾರಣವಾಗಿದೆ.
ಸಫಾರಿಗೆ ಅನುಮತಿ ಖಂಡಿಸಿ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಸಫಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ರೆಸಾರ್ಟ್ ಮತ್ತು ಹೋಟೆಲ್ ಮಾಲೀಕರು ಹಾಗೂ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು.
ಗುರುವಾರ ಮಧ್ಯಾಹ್ನ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಎದುರು ಸಾಮೂಹಿಕ ರೈತ ಸಂಘದ ರಾಜ್ಯ ಸಮಿತಿಯ ಸದಸ್ಯ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಫಾರಿ ಆರಂಭಿಸದಂತೆ ಹಾಗೂ ಸಫಾರಿಗೆ ಅನುಮತಿ ನೀಡಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸಫಾರಿ ಬೆಂಬಲಿಸಿ ಗುಂಪುಗುಂಪಾಗಿ ಆಗಮಿಸಿದ ಕೆಲವು ಸ್ಥಳೀಯ ಯುವಕರು, ರೆಸಾರ್ಟ್ ಮಾಲೀಕರು ಮತ್ತು ಕೆಲಸಗಾರರು ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರ ಜತೆ ವಾಗ್ವಾದ ನಡೆಸಲು ಮುಂದಾದರು. ಕೂಡಲೇ ಎಚ್ಚ್ಚೆತ್ತ ಪೊಲೀಸರು ಅವರನ್ನು ವಶಕ್ಕೆ ಪಡೆದು ಪಟ್ಟಣದ ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ವೇಳೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಕಾಡು ರೈತರ ತಾಯಿ. ಯಾವುದೇ ಕಾರಣಕ್ಕೂ ನಮ್ಮ ತಾಯಿಗೆ ತೊಂದರೆಯಾಗಲು ಬಿಡಲ್ಲ. ಸಫಾರಿ ನಿಲ್ಲಿಸಿದ ನಂತರ ಕಾಡು ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಫಾರಿ ನಡೆಸಬಾರದು. ಅರಣ್ಯ ಸಚಿವರು ರೆಸಾರ್ಟ್ ಮಾಲಿಕರ ಜತೆ ಶಾಮೀಲಾಗಿ ಸಫಾರಿ ಮರು ಆರಂಭಿಸಿದ್ದಾರೆ. ಸಫಾರಿ ವಾಪಸ್ ಪಡೆಯುವವರೆಗೂ ರೈತಸಂಘ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ. ಎಂಎನ್‌ಸಿ ಕಂಪನಿಗಳಿಗೆ ಭೂಮಿ ಮಾರಾಟ ಮಾಡಿಸಿ ನಂತರ ತಾವು ಹೊಡೆಯುವ ಹುನ್ನಾರ ಶಾಸಕ, ಸಚಿವರದ್ದು. ಹಾಗಾಗಿ ನಿಮ್ಮ ರೆಸಾರ್ಟ್ ಮಾಲಿಕರು ಖಾಸಗಿ ಕಂಪನಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಡಿವೈಎಸ್‌ಪಿ ಸ್ನೇಹರಾಜ್ ಮಾತನಾಡಿ, ಸರ್ಕಾರ ನಿರ್ಧಾರದ ವಿರುದ್ಧ ನೀವು ನ್ಯಾಯಾಲಯಕ್ಕೆ ಹೋಗಿ. ಈಗ ಪ್ರತಿಭಟನೆ ಕೈಬಿಡಿ ಎಂದು ಒತ್ತಾಯಿಸಿದರು.
ಈ ವೇಳೆ ವಕೀಲ ಮಂಜುನಾಥ್ ಮಾತನಾಡಿ, ಕಾನೂನು ಪ್ರಕ್ರಿಯೆ ವರ್ಷಾನುಗಟ್ಟಲೆ ನಡೆಯುತ್ತದೆ, ಎಲ್ಲದಕ್ಕೂ ಕಾನೂನು ಎಂದರೆ ಸಂವಿಧಾನದಲ್ಲಿ ಹೋರಾಟ, ಪ್ರತಿಭಟನೆಯ ಹಕ್ಕು ಇರುವುದು ಯಾಕೆ? ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ನೀವು ಸರ್ಕಾರಕ್ಕೆ ತಿಳಿಸಿ. ಜತೆಗೆ ಸಫಾರಿ ಇಲ್ಲದಿದ್ದರೆ ಪ್ರವಾಸೋದ್ಯಮ ಹಾಳಾಗುತ್ತದೆ ಎಂದು ವರದಿ ನೀಡಿರುವವರು ಸ್ಥಳಕ್ಕೆ ಬಂದು ನಮಗೆ ವಿವರಣೆ ನೀಡಬೇಕು ಎಂದು ಪಟ್ಟು ಹಿಡಿದರು.
ಸಂಜೆಯಾಗುತ್ತಿದ್ದರೂ ಪ್ರತಿಭಟನೆ ಮುಂದುವರೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ತಳ್ಳಾಟ ನೂಕಾಟ ಹಾಗೂ ಮಾತಿನ ಚಕಮಕಿ ನಡೆಯಿತು. ಎಲ್ಲ ರೈತರನ್ನ ಪೊಲೀಸರು ವಶಕ್ಕೆ ಪಡೆದು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಬೇಗೂರು ಪೊಲೀಸ್ ಠಾಣೆಗೆ ಕರೆದೊಯ್ದರು. ರೈತ ಮುಖಂಡರಾದ ಮಂಜು ಕಿರಣ್, ವಕೀಲ ರವಿಕುಮಾರ್, ಷಣ್ಮುಖ ಸ್ವಾಮಿ, ಮಹೇಶ್ ಬರಗಿ ಸೇರಿದಂತೆ ನೂರಾರು ರೈತರು ಇದ್ದರು.
ರೆಸಾರ್ಟ್ ಮಾಲೀಕರು ವಶಕ್ಕೆ: ಸಫಾರಿ ಮರು ಆರಂಭಿಸಬೇಕು ಎಂದು ಆಗ್ರಹಿಸಿ ರೆಸಾರ್ಟ್ ಮಾಲೀಕರು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನಾ ಸ್ಥಳಕ್ಕೆ ನುಗ್ಗಲು ಯತ್ನಿಸಿ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಸಫಾರಿ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ತೆರಕಣಾಂಬಿ ಠಾಣೆಗೆ ಕರೆದೊಯ್ದಿದ್ದರು.
ಸಫಾರಿ ಕೇಂದ್ರದ ಬಳಿ ಸಪಾರಿ ಪರ ಇರುವವರು ಹಾಗೂ ರೈತಸಂಘದ ವಿರುದ್ಧ ಘರ್ಷಣೆ ನಡೆಯುವ ಮುನ್ಸೂಚನೆ ತಿಳಿದ ಎಸ್ಪಿ ಮುತ್ತುರಾಜ್ ಸ್ವತಃ ತಾವೇ ಲಾಠಿ ಹಿಡಿದು ಎಲ್ಲರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದರು.