ಯಳಂದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಅಭಿಯಾನದ ನಿಮಿತ್ತ ಶಾಸಕ ಎ.ಆರ್.ಕೃಷ್ಣಮೂರ್ತಿ ಮಗುವೊಂದಕ್ಕೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. 
ಚಾಮರಾಜನಗರ

ಜಾಗತಿಕವಾಗಿ ಪೋಲಿಯೋ ಪಿಡುಗು ಕ್ಷೀಣ

ಎಂ.ರವಿ

ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಮತ

ಯಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪೋಲಿಯೋ ಒಂದು ಜಾಗತಿಕ ಪಿಡುಗಾಗಿತ್ತು. ಇದನ್ನರಿತ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಿತು. ಇಂದು ಜಾಗತಿಕವಾಗಿ ಈ ಕಾಯಿಲೆ ಕಡಿಮೆಯಾಗುತ್ತಿದೆ. ಆದರೂ ಇದನ್ನು ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವರ್ಷವೂ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ. ಇದಕ್ಕೆ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿಯನ್ನು ಹಾಕಿಸಬೇಕು. ಮುಂದೆ ಬರುವ ಮಾರಣಾಂತಿಕ ಕಾಯಿಲೆಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಮಾತನಾಡಿ, ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ಐದು ವರ್ಷದೊಳಗಿನ 61,167 ಮಕ್ಕಳಿದ್ದಾರೆ, ಇದನ್ನು ಹಾಕಲು 641 ಬೂತ್‌ಗಳನ್ನು ತೆರೆಯಲಾಗಿದೆ. ತಾಲೂಕಿನಲ್ಲಿ 5406 ಮಕ್ಕಳಿದ್ದು 44 ಬೂತ್‌ಗಳನ್ನು ತೆರೆಯಲಾಗಿದ್ದು 131 ಸಿಬ್ಬಂದಿ ಸಹ ಇದಕ್ಕೆ ನಿಯೋಜಿಸಲಾಗಿದೆ. ಒಂದು ವೇಳೆ ಇಂದು ಮಕ್ಕಳಿಗೆ ಲಸಿಕೆ ತಪ್ಪಿದ್ದಲ್ಲಿ, ಮನೆ ಮನೆಗಳಿಗೆ ತೆರಳಿ ಸೋಮವಾರ ಮತ್ತು ಮಂಗಳವಾರ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ವೈದ್ಯಾಧಿಕಾರಿ ಡಾ.ಶ್ರೀಧರ್, ಟಿಎಚ್‌ಒ ತನುಜಾ, ಡಾ.ನಾಗೇಂದ್ರಮೂರ್ತಿ, ಆರೋಗ್ಯ ಸಮಿತಿ ಸದಸ್ಯರಾದ ರೇವಣ್ಣ, ರೂಪೇಶ್ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಸದಸ್ಯ ಗುಂಬಳ್ಳಿ ರಾಜಣ್ಣ, ಪಪಂ ಮಾಜಿ ಸದಸ್ಯ ಮಹೇಶ್, ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್ ಬೇಗ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.