ಯಳಂದೂರಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.  
ಚಾಮರಾಜನಗರ

ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಆರ್.ಕೃಷ್ಣಮೂರ್ತಿ
  • ತಾಲೂಕು ಕಚೇರಿ ಮುಂಭಾಗ
  • ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ
ಯಳಂದೂರು: ಶಿಕ್ಷಣದಿಂದ ಎಲ್ಲವೂ ಸಾಧ್ಯವಿದ್ದು, ಶಿಕ್ಷಣ ಕಲಿತ ಎಲ್ಲರೂ ಪಂಡಿತರಾಗುವ ಸಾಧ್ಯತೆಗಳಿವೆ. ಆದರೆ ಉಪ್ಪಾರ ಸಮುದಾಯದಲ್ಲಿ ಶಿಕ್ಷಣಕ್ಕೆ ಮಹತ್ವ ಕಡಿಮೆ ಇರುವುದರಿಂದ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲ ಸಮುದಾಯಗಳಲ್ಲೂ ಅನೇಕ ದಾರ್ಶನಿಕರು ಇದ್ದಾರೆ. ಭಗೀರಥ ಮಹರ್ಷಿ ಉಪ್ಪಾರ ಸಮುದಾಯಕ್ಕೆ ಸೇರಿದ್ದು, ಧರೆಗೆ ಗಂಗೆಯನ್ನು ಹರಿಸಿ ಎಲ್ಲರ ದಣಿವನ್ನು ನೀಗಿಸಿದ ಪುಣ್ಯ ಪುರುಷ ಎಂದರು.
ಪಟ್ಟಣದ ಬಳೇಪೇಟೆಯ ಸುವರ್ಣಾವತಿ ನದಿ ದಡದಲ್ಲಿರುವ ಉಪ್ಪಾರ ಸಮುದಾಯ ಭವನಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದು, ಮೊದಲ ಕಂತಾಗಿ 25 ಲಕ್ಷ ರೂ. ಹಣ ಬಂದಿದೆ. ಸಮುದಾಯದ ಎಲ್ಲರೂ ಸೇರಿ ಒಂದು ದಿನಾಂಕ ನಿಗದಿಗೊಳಿಸಿದರೆ ಭೂಮಿಪೂ ನೆರವೇರಿಸಲಾಗುವುದು ಎಂದರು.
ನನ್ನ ಅಧಿಕಾರವಧಿಯಲ್ಲಿ ಮೊದಲ ಕಂತಿನಲ್ಲಿ ಬಂದ 25 ಕೋಟಿ ರೂ. ವಿಶೇಷ ಅನುದಾನವನ್ನು ಎಲ್ಲ ಜಾತಿ, ಧರ್ಮಗಳ ಸಮುದಾಯ ಭವನಕ್ಕೆ ನೀಡಿದ್ದೇನೆ. ಇದರಲ್ಲಿ ಉಪ್ಪಾರ ಸಮುದಾಯ ಭವನಗಳೂ ಸೇರಿವೆ. ಅಲ್ಲದೆ ಈ ಜನಾಂಗ ವಾಸ ಮಾಡುವ ನನ್ನ ಮತ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ರಸ್ತೆ, ಚರಂಡಿ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಅನುದಾನ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಉಳಿಕೆ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಶಿಕ್ಷಕ ಪಿ. ಗೋವಿಂದರಾಜು ಮಾತನಾಡಿ, ಉಪ್ಪಾರ ಸಮುದಾಯ ಶ್ರಮಿಕ ವರ್ಗವಾಗಿದೆ. ಆದರೆ ಕುಡಿತ ಚಟದಿಂದ ಅನೇಕ ತೊಂದರೆ ಅನುಭವಿಸುವಂತಾಗಿದೆ. ಯುವ ಪೀಳಿಗೆ ಈ ಚಟದಿಂದ ಹೊರಬರಬೇಕು. ಉಳಿತಾಯಕ್ಕೆ ಆದ್ಯತೆ ನೀಡಬೇಕು, ರಾಜಕೀಯದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಬೇಕು. ಜಾಗೃತಿ ಹಾಗೂ ಅರಿವಿನ ಕೊರತೆ ಇದ್ದು ಇದನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳು, ಸತ್ತಿಗೆ ಸೂರಿಪಾನಿಗಳೊಡನೆ ಭಗೀರಥರ ಭಾವಚಿತ್ರವನ್ನು ಅಲಂಕೃತ ಸರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ತಾಲೂಕಿನ ಸಾವಿರಾರು ಉಪ್ಪಾರ ಸಮುದಾಯದ ಯಜಮಾನರು, ಮುಖಂಡರು, ಯುವಕರು ಮೆರವಣಗೆಯಲ್ಲಿ ಭಾಗವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಮಾತನಾಡಿದರು. ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ತಹಸೀಲ್ದಾರ್ ಎಸ್.ಎಲ್. ನಯನಾ, ಬಿಇಒ ಎಂ.ಮಾರಯ್ಯ ಸೇರಿದಂತೆ ಅನೇಕರು ಇದ್ದರು.