ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಗುರುವಾರ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮುಂಭಾಗ ಗುರುವಾರ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದರು.
ನಗರಸಭೆ ಮಾಜಿ ಅಧ್ಯಕ್ಷರಾದ ರೇಖಾ ರಮೇಶ್ ಮಾತನಾಡಿ, ಕಾಂಗ್ರೆಸ್ ಕೊಳ್ಳೇಗಾಲ ಕ್ಷೇತ್ರಕ್ಕೆ ಮಂತ್ರಿ ಸ್ಥಾನವನ್ನು ಇದುವರೆವಿಗೂ ನೀಡಿಲ್ಲ. ಈಗಾಗಲೇ ಕೊಳ್ಳೇಗಾಲ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹಾಗಾಗಿ ಸದಾ ಅಭಿವೃದ್ಧಿ ಪರಚಿಂತನೆ ಮಾಡುವ ಅವರಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯಾಗುವ ಈ ಸಂದರ್ಭದಲ್ಲಿ ಬಿ.ರಾಚಯ್ಯ ಅವರ ಪುತ್ರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಅವಧಿಯಲ್ಲಿ ಕೊಳ್ಳೇಗಾಲ ಕ್ಷೇತ್ರಕ್ಕೆ ಸುಮಾರು 500 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಯಾವೊಬ್ಬ ದಲಿತ ಶಾಸಕರಿಗೆ ಈ ಕ್ಷೇತ್ರದಲ್ಲಿ ಐದು ವಷರ್ಗಳ ಕಾಲ ಸಚಿವ ಸ್ಥಾನ ಸಿಕ್ಕಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಶಾಂತರಾಜು, ಮಾಜಿ ಸದಸ್ಯರಾದ ಮಂಜುನಾಥ್, ಸುಮಾ ಸುಬ್ಬಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ಭೀಮನಗರ ಯಜಮಾನರಾದ ಚಿಕ್ಕಮಾಳಿಗೆ, ವರದರಾಜು, ಮಾಜಿ ಯಜಮಾನರು, ಮುಖಂಡ ಪ್ರಭುಸ್ವಾಮಿ, ಲಿಂಗರಾಜು, ಶ್ರೀಧರ್, ಶಂಕನಪುರ ಜಗದೀಶ್, ಪ್ರಕಾಶ್, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಮುಳ್ಳೂರು ಮಂಜು, ಸಿದ್ದಯ್ಯನಪುರ ಗ್ರಾಪಂ ಮಾಜಿ ಅಧ್ಯಕ್ಷ ಗುಣಶೇಖರ್ ಇತರರು ಇದ್ದರು.