ಚಾಮರಾಜನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಉದ್ಯಾನವನದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಪರಶುರಾಮ್ ಛಲವಾದಿ ಅವರು ಗಿಡನೆಡುವ ಮೂಲಕ ಚಾಲನೆ ನೀಡಿದರು. ಜಿ.ಬಂಗಾರು, ಮಂಜುನಾಥ್, ಮಣಿ, ಪವಿತ್ರಾ, ಮಹದೇವಮ್ಮ, ಪ್ರಕೃತಿ, ಸವಿತಾ ಇನ್ನಿತರರಿದ್ದರು.
- ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಮನವಿ
- ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
- ಸೀ ಶಕ್ತಿ ಸಂಘಗಳ ಸಹಯೋಗದಲ್ಲಿ ಆಯೋಜನೆ
ಚಾಮರಾಜನಗರ: ನಗರದ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಒತ್ತುನೀಡುತ್ತಿದ್ದು, ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಮನವಿ ಮಾಡಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನಗರಸಭೆ ಹಾಗೂ ಸೀ ಶಕ್ತಿ ಸಂಘಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಗಿಡನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ಅವಳಿ ಉದ್ಯಾನವನಗಳಿಗೆ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರು ವಾಯು ವಿಹಾರಕ್ಕೆ ಬರುತ್ತಾರೆ. ಈ ನಿಟ್ಟಿನಲ್ಲಿ ಉದ್ಯಾನವನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಸಾರ್ವಜನಿಕರು ಕೂಡ ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ಒಣ ಮತ್ತು ಹಸಿ ಕಸಗಳನ್ನು ಬೇರ್ಪಡಿಸುವ ಮೂಲಕ ಕಸದ ಡಬ್ಬಿಯಲ್ಲಿ ಹಾಕಿ ನಗರಸಭೆ ಜತೆಗೆ ಸಹರಾಕ ನೀಡಬೇಕು ಎಂದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗದ ಉದ್ಯಾನವನದಲ್ಲಿ ಕನ್ನಡದ ಭುವನೇಶ್ವರಿ ಪ್ರತಿಮೆ ನಿರ್ಮಾಣ ಮಾಡಿದ್ದು, ಸುತ್ತಲೂ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕಿದೆ. ಈ ಮೂಲಕ ಜಿಲ್ಲಾ ಕೇಂದ್ರವನ್ನು ಸ್ವಚ್ಛ ನಗರವಾಗಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಮಣಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪವಿತ್ರಾ, ಶ್ರೀಶಕ್ತಿ ಸಂಘದ ಪದಾಧಿಕಾರಿಗಳಾದ ಮಹದೇವಮ್ಮ, ಪ್ರಕೃತಿ, ಸವಿತಾ, ಕಾವ್ಯಶ್ರೀ, ಸುನೀತಾ, ರಾಜೇಶ್ವರಿ, ಶೈಲಜಾ, ಶೀಲಾ, ಸುಮಾ, ದೊಡ್ಡತಾಯಮ್ಮ, ಶಿಲ್ಪಶ್ರೀ ಇತರರಿದ್ದರು.