ಚಾಮರಾಜನಗ ತಾಲೂಕಿನ ಪಣ್ಯದಹುಂಡಿ ಗ್ರಾಮದಿಂದ ಪಾದಯಾತ್ರೆ ನಡೆಸಿದ ರೈತ ಮುಖಂಡರು ಮತ್ತು ಗ್ರಾಮಸ್ಥರು 
ಚಾಮರಾಜನಗರ

ಮೌಖಿಕ ಭರವಸೆ ಬದಲು ಲಿಖಿತ ಗ್ಯಾರಂಟಿ ಕೊಡಿ..!

ಪ್ರಮುಖ ಮುಖ್ಯಾಂಶಗಳು

  • ಪಣ್ಯದಹುಂಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ಪಾದಯಾತ್ರೆ
  • ಅಂಡರ್‌ಪಾಸ್ ನಿರ್ಮಾಣದ ವಿಶ್ವಾಸ ವ್ಯಕ್ತಪಡಿಸಿದ ಡಿಸಿ ಬಳಿ ಪತ್ರ ಕೇಳಿದ ಗ್ರಾಮಸ್ಥರು

ಚಾಮರಾಜನಗರ:
ತಾಲೂಕಿನ ಬದನಗುಪ್ಪೆ-ಪುಣ್ಯದಹುಂಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ವಿರುದ್ಧ ಮಂಗಳವಾರ ಪಾದಯಾತ್ರೆ ನಡೆಸಿದ ಗ್ರಾಮಸ್ಥರು ಅಂಡರ್‌ಪಾಸ್ ಮತ್ತು ಬಸ್ ನಿಲ್ದಾಣ ನಿರ್ಮಾಣ ಮಾಡುವ ಮೌಖಿಕ ಭರವಸೆ ಬದಲು, ಲಿಖಿತ ಪತ್ರದಲ್ಲಿ ಗ್ಯಾರಂಟಿ ಕೊಡಿ. ಇಲ್ಲದಿದ್ದರೆ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.
ತಾಲೂಕಿನ ಪುಣ್ಯದ ಹುಂಡಿ ಗ್ರಾಮದ ಬಸ್ ನಿಲ್ದಾಣದಿಂದ ಮಂಗಳವಾರ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಹೊರಟ ಪ್ರತಿಭಟನಾಕಾರರು ಮೈಸೂರು-ಚಾಮರಾಜನಗರ ಮುಖ್ಯರಸ್ತೆ ಮೂಲಕ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದರು. ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಜಿಲ್ಲೆಗೆ ಒಳ್ಳೆಯ ಯೋಜನೆಗಳು ಬರಬೇಕು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ ಹತ್ತಿರದಲ್ಲೇ ಇರುವುದರಿಂದ ಮೇಲ್ಸೇತುವೆ ನಿರ್ಮಾಣವಾದರೆ ಅನುಕೂಲವಾಗಲಿದೆ. ಗ್ರಾಮಸ್ಥರು ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾನು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೇನೆ. ರೈಲ್ವೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತನಾಡಿದ್ದೇನೆ. ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡುವ ಭರವಸೆ ಇದೆ ಎಂದರು. ಇದಕ್ಕೆ ಪ್ರತಿಭಟನಾಕಾರರು ಪ್ರತಿಕ್ರಿಯಿಸಿ, ಮೌಖಿಕವಾಗಿ ಭರವಸೆ ಕೊಡುವ ಬದಲು ಲಿಖಿತವಾಗಿ ಪತ್ರದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡುವುದಾಗಿ ಬರೆದು ಕೊಡಿ. ಪ್ರತಿಭಟನೆ ಕೈಬಿಡುತ್ತೇವೆ ಎಂದರು. ಇದಕ್ಕೆ ಅಧಿಕಾರಿಗಳಿಂದ ಉತ್ತರ ಸಿಗದ ಹಿನ್ನೆಲೆಯಲ್ಲಿ ಬುಧವಾರದಿಂದ ಗ್ರಾಮದಲ್ಲೇ ತಮ್ಮ ಹೋರಾಟವನ್ನು ಮುಂದುವರೆಸಲು ನಿರ್ಧರಿಸಲಾಯಿತು. ಪಣ್ಯದಹುಂಡಿ, ಬದನಗುಪ್ಪೆ, ಮೇಲಾಜಿಪುರ, ಹೆಗ್ಗೋಠಾರ, ಮರಳ್ಳಿಪುರ, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗುಂಡ್ಲುಪೇಟೆ ತಾಲೂಕು ರೈತ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಪ್ರತಿಭಟನೆ ಹತ್ತಿಕ್ಕುವ ಕೆಲಸ:
ಪಣ್ಯದಹುಂಡಿ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪೊಲೀಸರನ್ನು ಮುಂದೆ ಬಿಟ್ಟುಕೊಂಡು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸಿ ಎಂದು ನಾವು ಒತ್ತಾಯಿಸಿದರೇ, ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ರೈಲ್ವೆ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಅಂಡರ್‌ಪಾಸ್ ನಿರ್ಮಾಣ ಮಾಡದಿದ್ದರೆ ನಾವು ಕಾಮಗಾರಿ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ. ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆಗೆ ಅಂಡರ್‌ಪಾಸ್ ನಿರ್ಮಾಣ ಮಾಡಬೇಕು. ಈ ಸಂಬಂಧ ಹಂತ ಹಂತವಾಗಿ ನಿರಂತರ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರೊಂದಿಗೆ ಮಾತಿನ ಚಕಾಮಕಿ:
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಬಳಿ ತೆರಳಲು ಅವಕಾಶ ನೀಡಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಕೆಲಕಾಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲೇ ಕುರಿತು ಧರಣಿ ಮುಂದುವರಿಸಿದರು. ಈ ವೇಳೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಮಾತನಾಡಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.