ಗುಂಡ್ಲುಪೇಟೆ ಪಟ್ಟಣದ ಜ್ಞಾನಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎನ್.ದೀಪು ಉದ್ಘಾಟಿಸಿದರು. ಹೇಮಾವತಿ, ಸರಸ್ವತಿ, ಮಮತಾ ಯಜಮಾನ್ ಇದ್ದರು. 
ಚಾಮರಾಜನಗರ

ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಲಿ

ಪ್ರಮುಖ ಮುಖ್ಯಾಂಶಗಳು

  • higher education
ಗುಂಡ್ಲುಪೇಟೆ: ಸ್ವಪ್ರಯತ್ನದಿಂದ ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಅಬಕಾರಿ ನಿರೀಕ್ಷಕಿ ಎನ್.ದೀಪು ಹೇಳಿದರು.
ಪಟ್ಟಣದ ಜ್ಞಾನಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಣ್ಣು ಮಕ್ಕಳು ನಾವು ಯಾರ ಬಳಿಯೂ ಯಾವುದಕ್ಕೂ ಯಾಚಿಸಬೇಕಾಗಿಲ್ಲ. ನಮ್ಮ ಹಕ್ಕನ್ನು ನಾವು ಪ್ರಶ್ನೆ ಮಾಡಿ ಪಡೆದುಕೊಳ್ಳಬೇಕಾಗಿದೆ. ಇದಕ್ಕೆ ಶಿಕ್ಷಣದ ಅಗತ್ಯವಿದ್ದು ಎಲ್ಲರೂ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಪಾಲಕರು ಸಹಕಾರ ನೀಡುತ್ತಿದ್ದಾರೆ. ಆದರೆ ಕೆಲವು ಕಡೆ ಹೆಣ್ಣು ಮಕ್ಕಳು ಪ್ರೀತಿ ಪ್ರೇಮದ ಬಲೆಗೆ ಬಿದ್ದು ಮೋಸ ಹೋದ ಘಟನೆಗಳು ಪಾಲಕರಿಗೆ ಭಯವನ್ನುಂಟು ಮಾಡುತ್ತಿವೆ. ಈ ರೀತಿ ಆಗದಂತೆ ಮಕ್ಕಳು, ಸಮಾಜ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಹಲವು ಬಗೆಯ ನೃತ್ಯಗಳನ್ನು ಮಾಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಿದರು. ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಸರಸ್ವತಿ, ಮಹಿಳಾಪರ ಹೋರಾಟಗಾರ್ತಿ ಮಮತಾ ಯಜಮಾನ್ ಇದ್ದರು.