ಯಳಂದೂರು ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿರುವ ನೀರಿನ ತೊಂಬೆಯ ಸ್ಥಿತಿಯನ್ನು ತೋರಿಸುತ್ತಿರುವ ಸಾರ್ವಜನಿಕರು.
ಯಳಂದೂರು: ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೂದಿತಿಟ್ಟು ಗ್ರಾಮದಲ್ಲಿ ಕಂದಾಯ ಕಟ್ಟಿಸಿಕೊಳ್ಳಲು ಬಂದ ಪಿಡಿಒಗೆ ಗ್ರಾಮಸ್ಥರು ೇರಾವ್ ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ.
ಕಲುಷಿತ ನೀರು ಪೂರೈಕೆ, ಸ್ವಚ್ಛತೆಯ ಕೊರತೆಯಿಂದಾಗಿ ಗ್ರಾಮಸ್ಥರಲ್ಲಿ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಮೊದಲು ಸೌಲಭ್ಯಗಳನ್ನು ಸರಿಯಾಗಿ ಪೂರೈಕೆ ಮಾಡಬೇಕಾದ ಸ್ಥಳೀಯ ಆಡಳಿತವು ತನ್ನ ಜವಾಬ್ದಾರಿ ಮರೆತಿದೆ. ಇದೀಗ ಕಂದಾಯ ಕಟ್ಟಿಸಿಕೊಳ್ಳಲು ಬಂದಿದ್ದು, ನಮಗೆ ಸೌಲಭ್ಯಗಳೇ ಇಲ್ಲದ ಮೇಲೆ ಕಂದಾಯ ಏಕೆ ಕಟ್ಟಬೇಕು ಎಂದು ಪಿಡಿಒ ನಟರಾಜ್ ಅವರನ್ನು ಪ್ರಶ್ನೆ ಮಾಡಿದರು.
ಗ್ರಾಮಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದರೆ ಈ ನೀರು ಇಲ್ಲಿನ ಬೋರ್‌ವೆಲ್ ನೀರಿನೊಂದಿಗೆ ಮಿಶ್ರಣವಾಗುತ್ತದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು, ಅನೇಕರಿಗೆ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ. ನೀರಿನ ತೊಂಬೆಗಳನ್ನು ಶುಚಿಗೊಳಿಸಿ ತಿಂಗಳುಗಳೇ ಕಳೆದಿವೆ. ಗ್ರಾಮದಲ್ಲಿ ಚರಂಡಿಯಿಂದ ಎತ್ತಿದ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ರಸ್ತೆ ಬದಿಯಲ್ಲಿಯೇ ಸುರಿಯಲಾಗುತ್ತಿದ್ದು, ಕಸ ಮತ್ತೆ ಚರಂಡಿಯನ್ನೇ ಸೇರುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಬರುತ್ತಿವೆ. ಬೀದಿ ದೀಪಗಳೂ ಹಾಳಾಗಿವೆ. ಇಡೀ ಗ್ರಾಮವೇ ಅಶುಚಿತ್ವದಿಂದ ಕೂಡಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಮೊದಲು ಗಮನ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. 1,500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಹೀಗಿದ್ದರೂ ಸೂಕ್ತ ಸೌಲಭ್ಯ ಕಲ್ಪಿಸಲಾಗಿಲ್ಲ. ನಾವು ಯಾವುದೇ ದೂರು ನೀಡಿದರೂ ಪಿಡಿಒ ಸ್ಪಂದಿಸುತ್ತಿಲ್ಲ. ಮನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ನಡೆಯದಿದ್ದರೂ ಬಿಲ್ ಮಾಡಲಾಗಿದೆ. ದೊಡ್ಡ ಮಟ್ಟದಲ್ಲಿ ಅಕ್ರಮ ಆಗಿರುವ ಅನುಮಾನ ಇದೆ. ಈ ಬಗ್ಗೆ ಪ್ರಶ್ನೆ ಮಾಡಿದರೂ ಸೂಕ್ತ ಉತ್ತರ ಸಿಗುತ್ತಿಲ್ಲ. ಹೀಗಾಗಿ ಪಿಡಿಒ ಅವರನ್ನು ಬದಲಿಸಬೇಕು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ರಾಮದ ಜಗದೀಶ್‌ಗೌಡ, ನಾಗೇಂದ್ರ ಸ್ವಾಮಿ, ಬಿ. ಗಿರೀಶ್, ಪುರೋಹಿತ್, ಕಲ್ಲೇಶ್, ನಂದಕುಮಾರ್, ದೇವರಾಜು, ನಂಜಶೆಟ್ಟಿ, ಮನು ಪಟೇಲ್, ಮಹದೇವಪ್ಪ, ರಾಜು, ಮಹೇಶ ತಿಳಿಸಿದ್ದಾರೆ.