ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರಕ್ಕೆ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಹಾಲಸ್ವಾಮಿ, ಇಂದುಮತಿ ಇತರರಿದ್ದರು.
- ವಿದ್ಯಾರ್ಥಿಗಳಿಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ
ಹನೂರು: ಆರಂಭದಲ್ಲೇ ಉತ್ತಮ ಶಿಕ್ಷಣ ಪಡೆದು ಕೊಳ್ಳಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಶ್ರೀಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಕೃಪಾ ಎಜ್ಯುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ 5 ದಿನಗಳ ಬೇಸಿಗೆ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ ಹೊರತರುವುದಾಗಿದೆ. ಈ ದಿಸೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಇದಕ್ಕೆ ಸಂಪನ್ಮೂಲ ವ್ಯಕ್ತಿಗಳು ವಿಚಾರ ವಿನಿಮಯ ಮಾಡಲು ಹಾಗೂ ಮಕ್ಕಳೊಂದಿಗೆ ಕಲಿಯಲು ಸ್ವತಃ ಆಗಮಿಸಿರುವುದು ನಿಜಕ್ಕೂ ಸಂತಸದ ತಂದಿದೆ. ಯಾವುದೇ ವಿಷಯವನ್ನು ತಿಳಿಯಬೇಕಾದರೂ ಭಾಷೆಯ ಬಗ್ಗೆ ಪ್ರೇಮವಿರಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬರಹಗಾರ್ತಿ ಕುಸುಮ ಆಯರಹಳ್ಳಿ ಮಾತನಾಡಿ, ಸಾಧಿಸುವ ಛಲ ಮತ್ತು ಮನಸ್ಸಿದ್ದರೆ, ಏನನ್ನಾದರೂ ಸಾಧಿಸಬಹುದು. ಶ್ರೀಮಠದ ಬದಲಾವಣೆಯಿಂದ ಬೆಳವಣಿಗೆಯ ಮಟ್ಟ ಉತ್ತುಂಗಕ್ಕೇರಿದೆ. ಪೂಜ್ಯರ ಯೋಚನಾ ಮಾರ್ಗ ಈಗಿನ ಜನಾಂಗಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಪತ್ರಕರ್ತೆ ಶೋಭಾ ಮಳವಳ್ಳಿ ಮಾತನಾಡಿ, ಶಿಕ್ಷಣವೇ ಶಕ್ತಿ. ಶಿಕ್ಷಣದಿಂದ ಏನನ್ನಾದರೂ ಸಾಧಿಸಲು ಸಾಧ್ಯ, ಆತ್ಮವಿಶ್ವಾಸವೇ ಸಾಧನೆಯ ಮೊದಲ ಹೆಜ್ಜೆ. ಮಕ್ಕಳ ಭವಿಷ್ಯದ ಕನಸಿಗೆ ನೀರೆರೆಯುವ ಪ್ರಯತ್ನವಷ್ಟೇ ನಮ್ಮದು. ಈ ಶಿಬಿರವು ನಿಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬಲಿ ನಿಮ್ಮಲ್ಲಿನ ಪ್ರತಿಭೆ ಹೊರಹಾಕಲು ಈ ಸುಂದರ ವೇದಿಕೆ ಸಾಕ್ಷಿಯಾಗಲಿ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಶಿವರಾಜಪ್ಪ ಮಾತನಾಡಿದರು. ರಂಗಭೂಮಿ ಕಲಾವಿದ ಹಾಲಸ್ವಾಮಿ, ವಿಶ್ರಾಂತ ಉಪ ಕುಲಪತಿ ಇಂದುಮತಿ ಇನ್ನಿತರರು ಇದ್ದರು.