ಮಲೆಮಹದೇಶ್ವರ ಬೆಟ್ಟದಲ್ಲಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಅಂತರಗಂಗೆಯ ಗೌರಿ ಹೊಂಡದಿಂದ ಗೌರಮ್ಮನ ಮೂರ್ತಿಯನ್ನು ಮೆರವಣಿಗೆ ಮೂಲಕ ದೇಗುಲಕ್ಕೆ ತರಲಾಯಿತು.  
ಚಾಮರಾಜನಗರ

ಮಲೆ ಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಗೌರಿ ಪ್ರತಿಷ್ಠಾಪನೆ

ಪ್ರಮುಖ ಮುಖ್ಯಾಂಶಗಳು

  • ಅಂತರಗಂಗೆ ಹೊಂಡದಿಂದ ಗಂಗೆ, ಗೌರಮ್ಮನ ಮೂರ್ತಿ ಮೆರವಣಿಗೆ
  • ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ
ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಗೌರಿ, ಗಣೇಶ ಹಬ್ಬದ ಪ್ರಯುಕ್ತ ಬೇಡಗಂಪಣ ಅರ್ಚಕರು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಅಂತರಗಂಗೆಯ ಗೌರಿ ಹೊಂಡದಿಂದ ಗಂಗೆ ಹಾಗೂ ಗೌರಮ್ಮನ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಯಿತು.
ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 3.30ರಿಂದ 6ರವರೆಗೆ ಮಾದಪ್ಪನಿಗೆ ವಿವಿಧ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ವಿವಿಧ ಸೇವಾ ಉತ್ಸವಗಳಲ್ಲಿ ಭಾಗಿಯಾಗಿದ್ದರು.
ಸಂಜೆ 4.30ರಲ್ಲಿ ಉಪವಾಸವಿದ್ದ ಬೇಡಗಂಪಣ ಅರ್ಚಕರು ದೇಗುಲದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಅರ್ಚಕರು ಹಾಗೂ ಭಕ್ತರು ಸತ್ತಿಗೆ, ಸೂರಿಪಾನಿ, ಜಾಗಟೆ, ನಗಾರಿ ಹಾಗೂ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಅಂತರಗಂಗೆಯ ಗೌರಿ ಹೊಂಡಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಹೊಂಡದಲ್ಲಿ ನೀರು ಜಿನುಗುತ್ತಿದ್ದಂತೆಯೇ ಸಾಲೂರು ಶ್ರೀಗಳ ಸಮ್ಮುಖದಲ್ಲಿ ಮುತ್ತೈದೆಯರ ಮಂಗಳಕರ ವಸ್ತುಗಳಾದ ಕರಿಮಣಿ, ಕರಿಬಳೆ, ಬಿಚ್ಚೋಲೆ ಹಾಗೂ ಅರಿಸಿಣ, ಕುಂಕುಮವನ್ನು ಹೊಂಡಕ್ಕೆ ಬಾಗಿನ ರೂಪದಲ್ಲಿ ಅರ್ಪಿಸಲಾಯಿತು. ಸ್ವಾಮಿಯ ಅಭಿಷೇಕಕ್ಕೆ ಬೆಳ್ಳಿ ಕೊಡಗ ಹಾಗೂ ಗೌರಿ ಕಳಸಕ್ಕೆ ಹೊಂಡದ ನೀರನ್ನು ತುಂಬಿ ಬಿಲ್ವಾರ್ಚನೆ ನೆರವೇರಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.
ಗೌರಿ ಮೂರ್ತಿ ಮೆರವಣಿಗೆ:
ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಬಿದಿರಿನ ಪಲ್ಲಕ್ಕಿಯಲ್ಲಿ ಗೌರಿ ಮೂರ್ತಿಯನ್ನು ಕೂರಿಸಲಾಯಿತು. ನೀರು ತುಂಬಿದ ಕೊಡಗ ಹಾಗೂ ಗೌರಿ ಕಳಸವನ್ನು ಹೊತ್ತ ಬೇಡಗಂಪಣ ಅರ್ಚಕರು ಮೆರವಣಿಗೆ ಮೂಲಕ ದೇಗುಲಕ್ಕೆ ತಂದು ಪ್ರದಕ್ಷಿಣೆ ಹಾಕಿದರು. ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡ ಬೇಡಗಂಪಣ ಅರ್ಚಕರು ಮಹಾ ಮಂಗಳಾರತಿ ಬೆಳಗಿಸಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದೇ ವೇಳೆ ಗೌರಿ ಕಳಸಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಸಾಕಾನೆ ಉಮಾ ಮಹೇಶ್ವರಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಘೋಷಣೆಯನ್ನು ಮೊಳಗಿಸಿದರು.
ಬೇಡಗಂಪಣ ಅರ್ಚಕ ಕೆ.ವಿ.ಮಾದೇಶ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಪಾರುಪತ್ತೇದಾರ್ ಮಹದೇವಸ್ವಾಮಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರು ಇತರರು ಇದ್ದರು.
ಧಾನ್ಯದ ಪೂಜೆ ಬಳಿಕ ವಿಸರ್ಜನೆ:
ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ನೀರು ತುಂಬಿದ ಕಳಸಕ್ಕೆ ಬೇಡಗಂಪಣ ಸಂಪ್ರದಾಯದಂತೆ ಅರ್ಚಕರು 5 ದಿನಗಳ ಕಾಲ ಪೂಜೆ ನೆರವೇರಿಸಲಿದ್ದಾರೆ. ಅದರಂತೆಯೇ ಮಂಗಳವಾರ ಬೇಡಗಂಪಣ ಸಮುದಾಯದ ಮೊಣ್ಣೆಪಾಲಿನ ಗುಂಪಿನವರು ಅಕ್ಕಿ, ಬೆಲ್ಲ, ಹೆಸರುಬೇಳೆ ಹಾಗೂ ಇನ್ನಿತರ ಆಹಾರ ಧಾನ್ಯಗಳ ಪೂಜೆ ಸಲ್ಲಿಸಿದರು. ಬುಧವಾರ ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೌರಿ ಕಳಸಕ್ಕೆ ಪೂಜೆ ನೆರವೇರಲಿದೆ. ಮೂರನೇ ದಿನ ದೊಡ್ಡಪಾಲಿನ ಬೇಡಗಂಪಣ ಕುಲದವರು, 4ನೇ ದಿನ ಚಿಕ್ಕಪಾಲು ಮನೆತನದವರು ಹಾಗೂ ಕೊನೆಯ ದಿನ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ವಿಶೇಷ ಪೂಜೆ ನೆರವೇರಲಿದೆ. ಇದೇ ದಿನ ರಾತ್ರಿ ಗೌರಿ ಕಳಸವನ್ನು ಮೆರವಣಿಗೆ ಮೂಲಕ ಅಂತರಗಂಗೆಯ ಗೌರಿ ಮಡುವಿಗೆ ಕೊಂಡೊಯ್ದು ಧೂಪ, ದೀಪದ ದೀವಾಟಿಕೆ ಸೇವೆ ಜತೆಗೆ ಏಕ ಆರತಿ, ಕಳಸ ಆರತಿ, ಮೂರು ಆರತಿ, ಪಂಚ ಆರತಿ, ನಕ್ಷತ್ರ ಆರತಿ ಹಾಗೂ ರಥದ ಆರತಿಯನ್ನು ಬೆಳಗಿಸಲಾಗುತ್ತದೆ. ಗೌರಿ ಮೂರ್ತಿಗೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಕಳಸವನ್ನು ವಿಸರ್ಜಿಸಲಾಗುತ್ತದೆ.