ಯರಿಯೂರು ಗ್ರಾಮದ ಭಾನುವಾರ ಡಾ.ಭೀಮರಾವ್ ಹೆಬ್ಬಾಗಿಲು ಕಮಾನು
- ಪೊಲೀಸರಿಂದ ತಡೆ ಪ್ರಯತ್ನ, ಉದ್ವಗ್ನದ ಸ್ಥಿತಿ
- ಪಟ್ಟು ಬಿಡದ ಗ್ರಾಮಸ್ಥರಿಂದ ಕಮಾನು ಅಳವಡಿಕೆ
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಗೆ ತೆರಳುವ ರಸ್ತೆಯಲ್ಲಿ ಭಾನುವಾರು ಡಾ.ಭೀಮ್‌ರಾವ್ ಹೆಬ್ಬಾಗಿಲು ಕಮಾನು ಅಳವಡಿಕೆಗೆ ತಡೆಯೊಡ್ಡಿದ ಪೊಲೀಸರೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದರು. ಇದರಿಂದ ಕೆಲಕಾಲ ಉದ್ವಗ್ನದ ಸ್ಥಿತಿ ಉಂಟಾಯಿತು.
ಗ್ರಾಮದ ರಾಷ್ಟ್ರೀಯ ಹೆದ್ದಾರಿ 948 ಬದಿಯ ಮೂಲಕ ಪರಿಶಿಷ್ಟ ಜಾತಿ ಬಡಾವಣೆ ತೆರಳುವ ರಸ್ತೆಗೆ ಡಾ.ಭೀಮರಾವ್ ಹೆಬ್ಬಾಗಿಲು ಎಂಬ ನಾಮಫಲಕವಿರುವ ಕಮಾನು ಅಳವಡಿಕೆಗೆ ಸಮುದಾಯದ ಯಜಮಾನರು, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಭಾನುವಾರ ಬೆಳಗ್ಗೆ ಮುಂದಾದರು. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ಕಮಾನು ಅಳವಡಿಕೆಗೆ ನೀಡಿರುವ ಆದೇಶ ರದ್ದಾಗಿದೆ. ಆದರಿಂದ ಮತ್ತೊಮ್ಮೆ ಅನುಮತಿ ಪಡೆದು ಕಾಮಾನು ಅಳವಡಿಸುವಂತೆ ತಡೆದರು. ಈ ವೇಳೆ ಗ್ರಾಮಸ್ಥರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇದರಿಂದ ಉದ್ವಗ್ನ ಪರಿಸ್ಥಿತಿ ಉಂಟಾಯಿತು.
ಅಲ್ಲದೆ ಪೊಲೀಸರ ತಡೆಗೆ ಜಗ್ಗದೆ ನೂರಾರು ಯುವಕರು, ಮಹಿಳೆಯರು, ಗ್ರಾಮಸ್ಥರು ಅಂಬೇಡ್ಕರ್ ಹೆಬ್ಬಾಗಿಲಿನ ಫಲಕವನ್ನು ಕ್ರೇನ್ ಹಾಗೂ ಲಾರಿಯ ಸಹಾಯದಿಂದ ಅಳವಡಿಸಿದರು. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಗೆ ಕಾರಣ: ಮಾ. 26ರಂದು ಗ್ರಾಮದ ಪರಿಶಿಷ್ಟ ಜಾತಿ ಜನಾಂಗ ಹಾಗೂ ಕನಕ ಸೇವಾ ಸಮಿತಿಯಿಂದ ಇದೇ ಸ್ಥಳದಲ್ಲಿ ಕಮಾನು ಅಳವಡಿಕೆಗೆ ಪ್ರತ್ಯೇಕವಾಗಿ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಕೆಯಾಗಿತ್ತು ಪಿಡಿಒ ಶಿವಕುಮಾರ್ ಸ್ಥಳ ಪರಿಶೀಲಿಸಿ ದಾಖಲೆ ಪಡೆದು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವುಳ್ಳ ಕಮಾನು ನಿರ್ಮಿಸಲು ಏ.16 ರಂದು ಅನುಮತಿ ನೀಡಿದ್ದರು. ಆದೇಶ ಪ್ರತಿ ಪಡೆದು ಪರಿಶಿಷ್ಟ ಜಾತಿ ಜನಾಂಗದವರು ಕಮಾನು ಅಳವಡಿಕೆಗೆ ಭಾನುವಾರ ಬೆಳಂಬೆಳಗ್ಗೆ ಮುಂದಾಗಿದ್ದರು. ಆದರೆ ಪಿಡಿಒ ನೀಡಿರುವ ಅನುಮಾತಿ ಆದೇಶವು ದಿಢೀರನೇ ರದ್ದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿ, ಕಮಾನು ಅಳವಡಿಕೆಗೆ ತಡೆಯೊಡ್ಡಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಸ್ಥಳಕ್ಕೆ ಶಾಸಕ ಎಆರ್‌ಕೆ ಭೇಟಿ : ಸುದ್ದಿ ತಿಳಿದು ತಕ್ಷಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಗ್ರಾಮದಲ್ಲಿ ಶಾಂತಿ, ಸೌಹಾರ್ದದಿಂದ ಎಲ್ಲರೂ ಜೀವನಸಾಗಿಸಬೇಕು. ಈ ವಿವಾದ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ, ಸಿಇಒ. ಎಸ್ಪಿ, ಎಸಿ ಸಮ್ಮುಖದಲ್ಲಿ ಸಭೆ ಮಾಡಿ ಪೂರ್ವಪರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜಕೀಯ ನಾಯಕರಿಂದ ಒತ್ತಾಡ : ಎರಡು ಮೂರು ತಿಂಗಳಿಂದಲೂ ಕಮಾನು ಅಳವಡಿಕೆ ಸಣ್ಣ ಸಮಸ್ಯೆಯಾಗಿತ್ತು. ಪಿಡಿಒ ಅವರಿರಂದ ಅನುಮತಿ ಪಡೆದುಕೊಂಡು ಕಾನೂನಾತ್ಮಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಹೆಬ್ಬಾಗಿಲು ನಿರ್ಮಾಣ ಮಾಡುವ ಇಲ್ಲಿನ ಜನರಿಗೆ ಹಕ್ಕಿದೆ. ಆ ಹಿನ್ನೆಲೆಯಲ್ಲಿ ಕಮಾನು ಅಳವಡಿಕೆ ಮಾಡಿದ್ದಾರೆ. ಈ ಹಕ್ಕನ್ನು ಸರ್ಕಾರವಾಗಲಿ, ಬೇರೆ ಯಾರದರೂ ಸರಿ ಉಲ್ಲಂಘನೆ ಕಸಿದುಕೊಳ್ಳಬಾರದು. ಪೊಲೀಸರಿಂದ ಬೆದರಿಕೆ ಸರಿಯಾದ ಕ್ರಮವಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಬೇರೆ ಸ್ಥಳದಲ್ಲಿ ಕಮಾನು ಅಳವಡಿಸಿ ಎಂದು ಹೇಳಿರುವುದು ಸರಿಯಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು. ತಕ್ಷಣ ಜಿಲ್ಲಾಡಳಿತವು ಗಮನ ಹರಿಸಬೇಕು. ಈ ಹೋರಾಟದಲ್ಲಿ ಭಾಗಿಯಾಗಿರುವವ ವಿರುದ್ಧ ಕ್ರಮ ಕೈಗೊಂಡರೆ ರಾಜ್ಯದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.