ರಾಮಾಪುರದ ಮನೆ ಮುಂಭಾಗ ಗ್ರಾಹಕರು ಗ್ಯಾಸ್ ಪಡೆಯಲು ಕಾದು ನಿಂತಿರುವುದು.
ಹನೂರು ತಾಲೂಕಿನ ಮಿಣ್ಯಂ ಗ್ರಾಮದಲ್ಲಿ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ವಿತರಿಸುತ್ತಿಲ್ಲ.
ಕಳೆದ 8 ವರ್ಷದ ಹಿಂದೆ ಮಿಣ್ಯಂ ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಆರಂಭವಾಗಿತ್ತು. ಇದರಿಂದ ಹೆಚ್ಚು ಕಾಡಂಚಿನಿಂದ ಕೂಡಿರುವ ಈ ಭಾಗದ ಗ್ರಾಮಗಳ ಜನರಿಗೆ ಅನುಕೂಲವಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಈ ಏಜೆನ್ಸಿಯನ್ನು ರಾಮಾಪುರಕ್ಕೆ ವರ್ಗಾಯಿಸಿದರು.
ಈ ಬಗ್ಗೆ ಪ್ರಶ್ನಿಸಿದಾಗ ಬಿಲ್ ನೀಡಲು ನೆಟ್‌ವರ್ಕ್ ಸಮಸ್ಯೆ ಎಂದು ಏಜೆನ್ಸಿಯವರು ಸಾಬೂಬು ಹೇಳಿದ್ದರು. ಆದರೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ರಾಮಾಪುರ ಮನೆಯ ಆವರಣದಲ್ಲಿ ಗ್ಯಾಸ್ ಸಿಲಿಂಡರನ್ನು ಸಂಗ್ರಹಿಸಿ ವಿತರಿಸುತ್ತಿದ್ದಾರೆ.
ಮಿಣ್ಯಂ ಭಾಗದ ಜನರಿಗೆ ಸಮರ್ಪಕ ಸಿಲಿಂಡರ್ ವಿತರಣೆಯಾಗುತ್ತಿಲ್ಲ. ಇನ್ನು ಈ ಭಾಗದ ಜನರು ಗ್ಯಾಸ್ ಸಿಲಿಂಡರ್ ಪಡೆಯಬೇಕಾದರೆ 35 ಕಿ.ಮೀ.ದೂರವಿರುವ ರಾಮಾಪುರಕ್ಕೆ ಆಗಮಿಸಬೇಕಿದ್ದು, ತುಂಬ ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಿಣ್ಯಂ ಗ್ರಾಮದಲ್ಲಿ ಜನರಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ವಿತರಿಸಬೇಕು.