ಕೊಳ್ಳೇಗಾಲದಲ್ಲಿ ಕಸ ವಿಲೇವಾರಿಯಾಗಿದೆ ರಾಡಿಯಾಗಿ ಬಿದ್ದಿರುವುದು
- ತ್ಯಾಜ್ಯ ತಾಂಡವವಾಡುತ್ತಿದ್ದರೂ ಗಮನಹರಿಸದ ಸ್ಥಳೀಯ ಸಂಸ್ಥೆಗಳು
- ವೇಳಾಪಟ್ಟಿ ಪ್ರಕಾರ ತೆರವು ಮಾಡಿ
ಚಾಮರಾಜನಗರ: ಸ್ವಚ್ಛಂದ ಪರಿಸರದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಸ ವಿಲೇವಾರಿಯದ್ದೇ ಈಗ ದೊಡ್ಡ ಸಮಸ್ಯೆ.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕುಗಳಲ್ಲಿ ಸಮರ್ಪಕವಾಗಿ ಕಸ ಸಂಗ್ರಹವಾಗುತ್ತಿಲ್ಲ. ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತಾಂಡವವಾಡುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯದ ಸಂಗ್ರಹಣೆ ಮಾಡುವ ವಾಹನಗಳ ಕೊರತೆ ಕಾಡುತ್ತಿದೆ. ಪೌರಕಾರ್ಮಿಕರು ನಿಗದಿಗಿಂತಲೂ ಕಡಿಮೆ ಇದ್ದಾರೆ. ಇದರಿಂದಾಗಿಯೇ ಕಸ ವಿಲೇವಾರಿಗೆ ತೊಡಕು ಉಂಟಾಗುತ್ತಿದೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವ ದುರಭ್ಯಾಸವನ್ನು ಬಿಡುತ್ತಿಲ್ಲ. ಸ್ವಚ್ಛತೆ ಎನ್ನುವುದು ಕೆಲವೇ ವಾರ್ಡ್‌ಗಳಿಗೆ ಸೀಮಿತವಾಗಿ ಹೋಗಿದೆ.ಈ ಕುರಿತು ‘ಲೌಡ್ ಸ್ಪೀಕರ್’ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ವೇಳಾಪಟ್ಟಿ ಪ್ರಕಾರ ತೆರವು ಮಾಡಿ
ಚಾಮರಾಜನಗರದ ಬಡಾವಣೆಗಳಲ್ಲಿ ಕಸ ವಿಲೇವಾರಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಗರಸಭೆ ನಿರ್ಲಕ್ಷ್ಯದಿಂದ ಸ್ವಚ್ಛತೆ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರನ್ನು ವೇಳಾಪಟ್ಟಿ ಪ್ರಕಾರ ಎಲ್ಲ ಬಡಾವಣೆಗಳಿಗೂ ನಿಯೋಜನೆ ಮಾಡಬೇಕು. ನಗರಸಭೆಯ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ಇದನ್ನು ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಶ್ರೀರೂಪಾ ಅವರು ಕ್ರಮವಹಿಸಬೇಕು. ನಗರದ ಹಲವು ಕಡೆಗಳಲ್ಲಿ ಮ್ಯಾನ್‌ಹೋಲ್ ಬಾಯ್ದೆರೆದಿವೆ. ಕಸವನ್ನೇ ವಿಲೇವಾರಿ ಮಾಡಲಾಗದ ನಗರಸಭೆ ಇವುಗಳನ್ನೆಲ್ಲ ಹೇಗೆ ಸರಿಪಡಿಸುತ್ತದೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ನಗರ ಮತ್ತು ಪಟ್ಟಣದ ಸ್ವಚ್ಛತೆಯಲ್ಲಿ ಸ್ಥಳೀಯ ಸಂಸ್ಥೆಗಳು, ಪೌರಕಾರ್ಮಿಕರ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಸಾರ್ವಜನಿಕರ ಮೇಲೂ ಇದೆ. ಕಸ ವಿಲೇವಾರಿ ಮಾಡುವಾಗ ಹಸಿ ಮತ್ತು ಒಣ ಕಸ ವಿಂಗಡಿಸಿ ಕೊಡಿ ಕೊಡಬೇಕು. ಕಸ ಸಂಗ್ರಹಣೆಗೆ ಬರುವವರೆಗೂ ಕಾಯದೆ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆದು ಹೋಗಬಾರದು. ಪರಿಸರದ ಸ್ವಚ್ಚತೆ ಕಾಪಾಡುವಲ್ಲಿ ಎಲ್ಲರ ಪಾತ್ರವೂ ಮುಖ್ಯವಾಗಿದೆ.
ಪೌರಕಾರ್ಮಿಕ, ನಗರಸಭೆ, ಚಾಮರಾಜನಗರ
ಗುಂಡ್ಲುಪೇಟೆ ಪಟ್ಟಣದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಉಳಿದ ಬಡಾವಣೆಗಳಲ್ಲಿ ಅಶುಚಿತ್ವ ಕಾಡುತ್ತಿದೆ. ಪೌರಕಾರ್ಮಿಕರು ಪ್ರತಿ ದಿನವೂ ಕಸ ಗುಡಿಸಿ ಒಂದೆಡೆ ರಾಶಿ ಮಾಡಿದರೂ ಆಯಾ ದಿನ ವಿಲೇವಾರಿ ಮಾಡದೆ ರಾಶಿಯಾಗಿ ಬೀಳುತ್ತಿದೆ. ಆದ್ದರಿಂದ ಪುರಸಭೆಯಿಂದ ಮತ್ತಷ್ಟು ಸಿಬ್ಬಂದಿ ಹಾಗೂ ವಾಹನಗಳನ್ನು ಬಳಸಿ ಆಯಾ ದಿನದ ಕಸವನ್ನು ಅಂದೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು.
ಕೇರಳ ಮಾದರಿ ಅನುಸರಿಸಲಾಗುವುದು
ಗುಂಡ್ಲುಪೇಟೆ ಪಟ್ಟಣದಲ್ಲಿ ಸ್ವಚ್ಚತೆ ನಿರ್ವಹಣೆ ಮಾಡಲು ಇನ್ನೂ ಮೂರು ಕಸ ಸಾಗಾಣಿಕೆ ಆಟೋಗಳು ಹಾಗೂ ಮತ್ತಷ್ಟು ಸಿಬ್ಬಂದಿ ಕೊರತೆಯಿದೆ. ಆಟೋಗಳನ್ನು ಖರೀದಿಸಿದ ಕೂಡಲೇ ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡುವ ಮೂಲಕ ಕೇರಳ ಮಾದರಿಯನ್ನು ಅಳವಡಿಸಲಾಗುವುದು.
ಮುಖ್ಯಾಧಿಕಾರಿ, ಗುಂಡ್ಲುಪೇಟೆ ಪುರಸಭೆ
ಕೊಳ್ಳೇಗಾಲದ ಡಾ.ಶ್ರೀಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಕಾರ್ಯವನ್ನು ನಗರಸಭೆ ಸಮರ್ಪಕವಾಗಿ ಮಾಡುತ್ತಿಲ್ಲ. ಒಂದು ವಾರಕ್ಕೊಮ್ಮೆ ಒಂದು ಬಾರಿ ಸ್ವಚ್ಛತಾ ವಾಹನ ಬರುತ್ತದೆ. ಅಧಿಕಾರಿಗಳಿಗೆ ಈ ಬಗ್ಗೆ ದೂರಿದರೆ ಪೌರ ಕಾರ್ಮಿಕರ ಕೊರತೆ ಹಾಗೂ ಸ್ವಚ್ಛತಾ ವಾಹನ ಚಾಲಕರ ಕೊರತೆ ಇದೆ ಎಂದು ನೆಪ ಹೇಳುತ್ತಾರೆ. ಬಡಾವಣೆಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಕಸವನ್ನು ಸುರಿಯಲಾಗುತ್ತಿದೆ.
ಶಿವಕುಮಾರ ಸ್ವಾಮೀಜಿ ಬಡಾವಣೆ, ಕೊಳ್ಳೇಗಾಲ
ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 67 ಸಾವಿರ ಜನಸಂಖ್ಯೆ ಇದೆ. 700 ಜನರಿಗೆ ಒಬ್ಬ ಪೌರ ಕಾರ್ಮಿಕ ಇರಬೇಕೆಂಬುದು ನಿಯಮವಾಗಿದೆ. ಆದರೆ, ಈ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಪೌರಕಾರ್ಮಿಕರಿಲ್ಲ. 80 ಪೌರಕಾ ರ್ಮಿಕರ ಅಗತ್ಯವಿದೆ. ಆದರಲ್ಲಿ 53 ಪೌರಕಾರ್ಮಿಕರು ಮಾತ್ರ ಇಡೀ ನಗರದ ಸ್ವಚ್ಚತಾ ಕಾ ರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರಿಗೆ ಕೆಲಸದಲ್ಲಿ ಒತ್ತಡವಿದೆ. ಹಾಗಾಗಿ ಬಾಕಿ ಉಳಿದಿರುವ 23 ಪೌರ ಕಾ ರ್ಮಿಕರ ನೇಮಕಾತಿ ಆಗಬೇಕಿದೆ. ಇದ್ದರಿಂದ ಸ್ವಚ್ಚ ಪರಿಸರವನ್ನು ನಾಗರೀಕರಿಗೆ ನೀಡಲು ಸವಾಲಾಗಿದೆ. ಇರುವ ಪೌರ ಕಾರ್ಮಿಕ ರಲ್ಲಿ ಇಬ್ಬರು ಜಟ್ಟಿಂಗ್, ಸಕ್ಕಿಂಗ್ ಯಂತ್ರದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಆರೋಗ್ಯ ನಿರೀಕ್ಷಕ, ನಗರಸಭೆ, ಕೊಳ್ಳೇಗಾಲ
ಕಸ ವಿಲೇವಾರಿ ವಾಹನ ಕಳುಹಿಸಿಕೊಡಿ
ಹನೂರಿನಲ್ಲಿ 1ನೇ ವಾರ್ಡ್‌ನದಲ್ಲಿ ವಾರದಲ್ಲಿ 3 ದಿನಕ್ಕೊಮ್ಮೆ ಮಾತ್ರ ಕಸ ಸಂಗ್ರಹಿಸುವ ವಾಹನ ಬರುತ್ತಿದೆ. ಜತೆಗೆ ಇನ್ನು ಕೆಲವು ವಾರ್ಡ್‌ಗಳಿಗೆ ವಾಹನಗಳೇ ಹೋಗುವುದೇ ಇಲ್ಲ. ಇದರಿಂದಾಗಿ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನಹರಿಸಿ ಎಲ್ಲ ವಾರ್ಡ್‌ಗಳಿಗೂ ನಿತ್ಯ ಕಸ ವಿಲೇವಾರಿ ವಾಹನಗಳನ್ನು ಕಳುಹಿಸಿಕೊಡಬೇಕು.
ಮಾಳದಲ್ಲಿ ತ್ಯಾಜ್ಯ ಹಾಕಬೇಕಿದೆ
ಹನೂರಿನಲ್ಲಿ ಎಲ್ಲ ವಾರ್ಡ್‌ಗಳಿಗೂ ಕಸ ವಿಲೇವಾರಿ ವಾಹನ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕೆಇಬಿ ಮುಂಭಾಗದ ಬಡಾವಣೆಗೆ ಸರಿಯಾಗಿ ಕಸ ಸಂಗ್ರಹಿಸುವ ವಾಹನ ಬರುವುದಿಲ್ಲ. ಇದರಿಂದ ಕಸವನ್ನು ಮಾಳದಲ್ಲಿ ಹಾಕಬೇಕಿದೆ. ಬಡಾವಣೆಗೆ ನಿತ್ಯ ವಾಹನ ಆಗಮಿಸಿದರೆ ಮಾಳದಲ್ಲಿ ಕಸ ಹಾಕುವುದು ತಪ್ಪುತ್ತದೆ.
ಕೆಇಬಿ ಕಚೇರಿ ಮುಂಭಾಗದ ನಿವಾಸಿ, ಹನೂರು
ಯಳಂದೂರು ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಪಟ್ಟಣದ ಪ್ರದೇಶದಲ್ಲಿ ಕಸ ಸಂಗ್ರಹಿಸುವ ವಾಹನಗಳು, ಸಿಬ್ಬಂದಿಗಳ ಕೊರತೆಯಿಂದ ರಸ್ತೆಯ ಬದಿಗಳಲ್ಲಿ ಕಸ ಸಂಗ್ರಹ ಸಮರ್ಪಕವಾಗಿ ಸ್ವಚ್ಛತೆಯಾಗುತ್ತಿಲ್ಲ. ಇದು ರೋಗ ಹರಡುವುದಕ್ಕೆ ಕಾರಣವಾಗಿದೆ. ಆದ್ದರಿಂದ ಕೂಡಲೇ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕಾಗಿದೆ.
ಸೂಕ್ತವಾಗಿ ವಿಂಗಡಿಸುತ್ತಿಲ್ಲ
ಯಳಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಡಾವಣೆಗಳಲ್ಲಿ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ವಿಂಗಡಣೆ ಮಾಡಿಕೊಡುತ್ತಿಲ್ಲ. ಜತೆ ರೀತಿಯಲ್ಲಿ ಕಸ ಸಂಗ್ರಹಿಸುವ ವಾಹನಗಳು ದಿನನಿತ್ಯ ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸುತ್ತಿಲ್ಲ, ಇದರಿಂದ ಬಡಾವಣೆಗಳ ಅಶುಚಿತ್ವ ತಾಂಡವಾಡುತ್ತಿದೆ. ಬಡಾವಣೆಗಳ ಕಸ ಸಂಗ್ರಹಿಸುವ ತೊಟ್ಟಿಗಳನ್ನು ನಿರ್ಮಿಸಿಲ್ಲ. ಇದರಿಂದ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಸ ಎಸೆಯಾಗುತ್ತಿದೆ. ಈ ಸಂಬಂಧ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಡಾವಣೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ ಕಸವನ್ನು ವಿಲೇವಾರಿ ಮಾಡುವ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ.