ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
- ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ
- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಚಾಮರಾಜನಗರ: ಪ್ರಜಾಪ್ರಭುತ್ವದ ಮೌಲ್ಯಗಳ ಬಲವರ್ಧನೆಗಾಗಿ ಸಂವಿಧಾನದ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬ ನಾಗರಿಕರು ಮುಂದಾಗುವಂತೆ ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದಾದ್ಯಂತ ಇಂದು ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ದಿನಕ್ಕೆ ಇತಿಹಾಸವಿದೆ. ಭಾರತ ಸಂವಿಧಾನದ ಪ್ರಮುಖ ಆಶಯಗಳಾಗಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಸಾಮಾಜಿಕ ನ್ಯಾಯ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಅಂಶಗಳನ್ನು ಪ್ರಜಾಪ್ರಭುತ್ವದಲ್ಲಿ ಅಡಕಗೊಳಿಸಲಾಗಿದೆ. ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಸಂವಿಧಾನದ ಆಶಯಗಳನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಮಹತ್ವವನ್ನು ನಾವೆಲ್ಲರೂ ಅರಿಯಬೇಕು ಎಂದರು.
12ನೇ ಶತಮಾನದಲ್ಲಿ ಸಾಂಸ್ಕøತಿಕ ನಾಯಕ ಬಸವಣ್ಣನವರು ಎಲ್ಲಾ ವರ್ಗಗಳ ಜನರನ್ನು ಒಟ್ಟುಗೂಡಿಸಿ ಅನುಭವ ಮಂಟಪದ ಮೂಲಕ ಮೊದಲ ಸಂಸತ್ತು ಸ್ಥಾಪಿಸಿದ್ದರು. ಅಮೇರಿಕಾದ ಅಬ್ರಹಾಂ ಲಿಂಕನ್ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಸರ್ಕಾರ ರಚಿಸಿ ಆಧುನಿಕ ಜಗತ್ತಿನ ಮೊದಲ ಪ್ರಜಾಪ್ರಭುತ್ವ ಜಾರಿಗೊಳಿಸಿದ್ದರು. ಭಾರತ ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಮಾನತೆ ಒದಗಿಸಲು ಮುಂದಾದರು. ಪ್ರಜಾಪ್ರಭುತ್ವದ ಆದರ್ಶಗಳನ್ನು ಅರ್ಥೈಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿಯುವಂತೆ ಸಚಿವರಾದ ಪುಟ್ಟರಂಗಶೆಟ್ಟಿ ಹೇಳಿದರು.
ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಮಾತನಾಡಿ ವಿಶ್ವದಲ್ಲಿ ಪ್ರಜಾಪ್ರಭುತ್ವ ಆಡಳಿತ ಹೊಂದಿರುವ ಎಲ್ಲಾ ದೇಶಗಳು ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುತ್ತಿವೆ. ಭಾರತವು ಪ್ರಪಂಚದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ಹಾಗೂ ಶ್ರೇಷ್ಠ ಸಂವಿಧಾನ ಹೊಂದಿರುವ ದೇಶವಾಗಿದ್ದು, ದೇಶದಲ್ಲಿ ನಾವೆಲ್ಲರೂ ಶಾಂತಿ, ನೆಮ್ಮದಿಯಿಂದ ಬದುಕಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ಪ್ರಜಾಪ್ರಭುತ್ವದಡಿ ಕಾನೂನಿನ ಚೌಕಟ್ಟಿನೊಳಗೆ ಎಲ್ಲರೂ ಸಮಾನರು. ಸಮಾನತೆ, ಜಾತ್ಯಾತೀತ ಮನೋಭಾವದಿಂದ ಸ್ತ್ರೀಸಾಮಾನ್ಯರ ಹಕ್ಕುಗಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದಿನ ಯುವಕರು, ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಪಡೆಯಲು ಗ್ರಂಥಾಲಯಗಳಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಭೋಗಾಪುರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ದೇವರಾಜು ಅವರು ಮಾತನಾಡಿ 1997ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿತು. 1998ರಲ್ಲಿ ಸಮಿತಿ ಅಂತರಾಷ್ಟ್ರೀಯ ಮಟ್ಟದಲ್ಲಿ ದಿನಾಚರಣೆ ಆಚರಿಸಲು ಶಿಫಾರಸು ಮಾಡಿತ್ತು. 2008ರಲ್ಲಿ ಭಾರತದಲ್ಲಿ ಮೊದಲಬಾರಿಗೆ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು. ಪ್ರಜಾಪ್ರಭುತ್ವದ ಯಶಸ್ಸಿಗೆ ಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕು. ಚುನಾವಣೆಗಳ ಏರುಪೇರುಗಳ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕರ್ನಾಟಕ ಸರ್ಕಾರವು 2024ರಲ್ಲಿ ಮೊದಲಬಾರಿಗೆ ಪ್ರಜಾಪ್ರಭುತ್ವ ದಿನಾಚರಣೆ ಆಯೋಜಿಸಿ ಬೀದರ್‍ನಿಂದ ಚಾಮರಾಜನಗರದವರೆಗೆ ಸಾರ್ವಜನಿಕರು, ಅಧಿಕಾರಿ, ನೌಕರರು, ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಸಂವಿಧಾನ ಜಾಗೃತಿ ಕುರಿತ ಮಾನವ ಸರಪಳಿ ರಚಿಸಿ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಗಮನ ಸೆಳೆಯಿತು. ಪ್ರಸ್ತುತ 2026ರಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯಸರ್ಕಾರವು ಎಲ್ಲಾ ಶಾಲಾ ಕಾಲೇಜುಗಳಲ್ಲಿ ‘ಯುವ ಸಂಸತ್ತು’ ರಚನೆ ಮೂಲಕ ಮಕ್ಕಳಿಗೆ ವಿಧಾನಸಭೆಯ ಕಾರ್ಯಕಲಾಪಗಳನ್ನು ವಿದ್ಯಾರ್ಥಿಹಂತದಲ್ಲಿಯೇ ಪರಿಚಯಿಸುವ ಮಹತ್ವದ ಕಾರ್ಯ ಕೈಗೊಂಡಿದೆ ಎಂದು ಡಾ. ಪಿ. ದೇವರಾಜು ಅವರು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ (ಮುನ್ನ) ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಮಸಮುದ್ರ ಪುಟ್ಟಸ್ವಾಮಿ ಅವರು ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಿ.ಎಸ್. ರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಸೋಮೇಶ್ವರ, ತಹಶೀಲ್ದಾರ್ ಬಿ. ಗಿರಿಜಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಾಂಸ್ಕøತಿಕ ನಾಯಕ ಬಸವಣ್ಣನವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.