ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲೀಪುರ ಸಮೀಪ ಹುಲಿ ಸೆರೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
- ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
ಗುಂಡ್ಲುಪೇಟೆ: ತಾಲೂಕಿನ ಚನ್ನಮಲ್ಲೀಪುರ ಗ್ರಾಮದ ಬಾಳೆ ತೋಟದಲ್ಲಿ ಬೀಡುಬಿಟ್ಟಿರುವ ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ವಿಳಂಬ ಮಾಡುತ್ತಿರುವುದು ಈ ಭಾಗದ ರೈತರನ್ನು ಕೆರಳಿಸಿದೆ.
ಕಳೆದ ಎರಡು ದಿನಗಳಿಂದ ನಾಗಪ್ಪ ಅವರ ಜಮೀನಿನಲ್ಲಿ ಹುಲಿ ಬೀಡುಬಿಟ್ಟಿದ್ದರೂ ಅರಣ್ಯ ಇಲಾಖೆ ಸೆರೆ ಹಿಡಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಬುಧವಾರ ರಾತ್ರಿ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆಗೆ ಬಂದ ಅರಣ್ಯಾಧಿಕಾರಿಗಳನ್ನು ತಮ್ಮ ಜಮೀನುಗಳಿಗೆ ಪ್ರವೇಶಿಸದಂತೆ ಬಹಿಷ್ಕಾರ ಹಾಕಿ ವಾಪಸ್ ಕಳಿಸಿದರು.
ಗುರುವಾರ ಬೆಳಗ್ಗೆ ಹುಲಿಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ವಕೀಲ ಅನಿಲ್ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರನ್ನು ಚದುರಿಸಲು ಮುಂದಾದಾಗ ರೈತರೊಂದಿಗೆ ಮಾತಿನ ಚಕಮಕಿ ನಡೆಯಿತು. ನಂತರ ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ಮತ್ತು ಸಬ್ ಇನ್‌ಸ್ಪೆಕ್ಟರ್ ನರೇಶ್ ಕುಮಾರ್ ಜನರನ್ನು ಮನವೊಲಿಸಿ ದೂರಕ್ಕೆ ಕಳುಹಿಸಿದರು.
ಗುರುವಾರ ಬೆಳಗ್ಗೆ ಹುಲಿ ಸೆರೆಗೆ ಅನುಮತಿ ದೊರಕಿದ ಕೂಡಲೇ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸಿದ್ಧತೆ ಕೈಗೊಂಡಿತು. ಮಧ್ಯಾಹ್ನವೇ ಮೈಸೂರಿನಿಂದ ಸಿಸಿಎಫ್ ಡಾ.ರವಿಶಂಕರ್, ಪಶುವೈದ್ಯರಾದ ಡಾ.ವಾಸಿಂ ಮಿರ್ಜಾ ಮತ್ತು ಡಾ.ರಮೇಶ್ ಬಂದಿದ್ದರೂ ಸಾಕಾನೆಗಳು ಲಭ್ಯವಿಲ್ಲದೆ ಕಾರ್ಯಾಚರಣೆ ವಿಳಂಬವಾಯಿತು. ಮತ್ತಿಗೋಡು ಮತ್ತು ಬಳ್ಳೆಯಿಂದ ಕೂಂಬಿಂಗ್ ಸ್ಪೆಷಲಿಸ್ಟ್‌ಗಳಾದ ಭೀಮ ಮತ್ತು ಮಹೇಂದ್ರ ಅವರನ್ನು ಕರೆಸಲಾಗುತ್ತಿದೆ. ರಾಂಪುರದಿಂದ ಭಗೀರಥ ಆನೆ ಬಂದಿದ್ದು, ಅದರ ಜತೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಮದ್ದೂರು ವಲಯದ ಆರ್‌ಎಫ್‌ಒ ಪುನೀತ್ ಕುಮಾರ್ ತಿಳಿಸಿದ್ದಾರೆ.