ಗುಂಡ್ಲುಪೇಟೆ ಪಟ್ಟಣದಲ್ಲಿ ಬೀದಿನಾಯಿಗಳ ದಾಳಿಗೆ ಬಲಿಯಾದ ಕುರಿಗಳು.
ಗುಂಡ್ಲುಪೇಟೆ: ಬೀದಿ ನಾಯಿಗಳ ದಾಳಿಗೆ ಪಟ್ಟಣದ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ಮೇಯುತ್ತಿದ್ದ ನಾಲ್ಕು ಕುರಿಗಳು ಬಲಿಯಾಗಿವೆ.
ಪಟ್ಟಣದ ಅಂಬೇಡ್ಕರ್ ವೃತ್ತದ ನಿವಾಸಿ ರಾಮಸ್ವಾಮಿ ಪಟ್ಟಣದ ಹೊರವಲಯದಲ್ಲಿ ಮೇಯಲು ಬಿಟ್ಟಿದ್ದಾಗ ಬೀದಿನಾಯಿಗಳ ಹಿಂಡು ದಾಳಿ ನಡೆಸಿವೆ. ಜೋರಾಗಿ ಕೂಗಿಕೊಂಡರೂ ಲೆಕ್ಕಿಸದೆ ಕುರಿಗಳನ್ನು ಕಚ್ಚಿಹಾಕಿವೆ. ನನಗೆ ವಯಸ್ಸಾಗಿರುವ ಕಾರಣ ನಾಯಿಗಳನ್ನು ಓಡಿಸಿ ಕುರಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಬೀದಿನಾಯಿಗಳು ನಾಲ್ಕು ಕುರಿಗಳನ್ನು ಕೊಂದುಹಾಕಿವೆ ಎಂದು ಕುರಿಗಾಹಿ ರಾಮಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಚಿಕನ್ ಸೆಂಟರ್, ಮಾಂಸದಂಗಡಿಯವರು ಎಲ್ಲೆಂದರಲ್ಲಿ ಮಾಂಸದ ತುಣುಕುಗಳಿರುವ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಮಾಂಸದ ರುಚಿ ನೋಡಿರುವ ಬೀದಿ ನಾಯಿಗಳು ಜಾನುವಾರುಗಳನ್ನು ಬಲಿ ಪಡೆಯುತ್ತಿವೆ. ಬೈಕುಗಳನ್ನು ಬೆನ್ನಟ್ಟಿ ಮನುಷ್ಯರ ಮೇಲೂ ಆಕ್ರಮಣಕ್ಕೆ ಮುಂದಾಗುತ್ತಿವೆ. ಆದ್ದರಿಂದ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದನ್ನು ತಡೆಯಬೇಕು. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪುರಸಭೆಯವರು ಕ್ರಮ ಕೈಗೊಳ್ಳಬೇಕು. ಕುರಿ ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.