ಮಂಗಲ ಗ್ರಾಮದ ಮೂಡಲ ಬೀದಿಯ ಚರಂಡಿಯಲ್ಲಿ ಹೂಳು ತುಂಬಿರುವುದು.
- ಮಂಗಲ ಗ್ರಾಮದ ಮೂಡಲ ಬೀದಿ
- ಚರಂಡಿಯಲ್ಲಿ ತುಂಬಿರುವ ಹೂಳನ್ನು
ಹನೂರು: ತಾಲೂಕಿನ ಮಂಗಲ ಗ್ರಾಮದ ಮೂಡಲ ಬೀದಿಯ ಚರಂಡಿಯಲ್ಲಿ ತುಂಬಿರುವ ಹೂಳನ್ನು ತೆರೆವುಗೊಳಿಸುವಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಚರಂಡಿಯಲ್ಲಿ ಹೂಳು ತೆಗೆಸಿ ಹಲವು ತಿಂಗಳೇ ಕಳೆದಿದೆ. ಇದೀಗ ಚರಂಡಿಯಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಹೂಳು ತುಂಬಿದೆ. ಪರಿಣಾಮ ಕೊಳಚೆ ನೀರು ಹರಿಯಲು ಸಾಧ್ಯವಾಗದೆ ಮಡುಗಟ್ಟು ನಿಂತಿದ್ದು, ದುರ್ವಾಸನೆ ಬೀರುತ್ತಿದೆ. ಇದರಿಂದ ಮೂಗು ಮುಚ್ಚಿಕೊಂಡು ಒಡಾಡಬೇಕಾದ ಪರಿಸ್ಥಿತಿ ಇದೆ.
ಅನೈರ್ಮಲ್ಯ ಮನೆ ಮಾಡಿರುವ ಪರಿಣಾಮ ಬೆಳಗ್ಗೆ ವೇಳೆಯೇ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರಾತ್ರಿ ವೇಳೆಯಲ್ಲಂತೂ ಹೇಳತೀರದಾಗಿದೆ. ಇದರಿಂದ ರೋಗ ಹರಡುವ ಆತಂಕ ಎದುರಾಗಿದೆ. ಹೂಳನ್ನು ತೆರೆವುಗೊಳಿಸುವಂತೆ ಪಿಡಿಒ ದೊರೆಯಾ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಗಮನಹರಿಸಿ ಚರಂಡಿಯಲ್ಲಿನ ಹೂಳನ್ನು ತೆರೆವುಗೊಳಿಸುವುದರ ಮೂಲಕ ಸ್ವಚ್ಛತೆ ಕಾಪಾಡುವಂತೆ ನಿವಾಸಿ ಸತೀಶ್ ಒತ್ತಾಯಿಸಿದ್ದಾರೆ.
ಈ ಸಂಬಂಧ ವಿಜಯವಾಣಿಯೊಂದಿಗೆ ಪ್ರತಿಕ್ರಿಯಿಸಿದ ಪಿಡಿಒ ದೊರೆಯಾ, ಕಾರ್ಮಿಕರು ಲಭ್ಯವಾಗದ ಕಾರಣ ಹೂಳು ತೆಗೆಸಲು ತೊಡಕಾಗಿದೆ. ಈ ಬಗ್ಗೆ ಮುತುರ್ವಜಿ ವಹಿಸಿ ಶನಿವಾರ ಹೂಳು ತೆಗೆಸುವುದಾಗಿ ತಿಳಿಸಿದರು.