ಬೈಲೂರಿನಲ್ಲಿ ಮಾನವ, ವನ್ಯಜೀವಿ ತಡೆ ಹಾಗೂ ರೈತರ ಕುಂದು ಕೊರತೆ ಸಂಬಂಧ ಸಭೆ ನಡೆಯಿತು. ಶ್ರೀಪತಿ, ಭಾಸ್ಕರ್, ಪ್ರಮೋದ್, ವಾಸು ಇತರರಿದ್ದರು.
- ಶ್ರೀಪತಿ ಅಭಿಪ್ರಾಯ
- ರೈತರ ಕುಂದು ಕೊರತೆ ಸಭೆ
ಹನೂರು: ಕಾಡಾನೆಯನ್ನು ಸೆರೆ ಹಿಡಿಯುವುದಾಗಿ ಹಾಗೂ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಶ್ರೀಪತಿ ತಿಳಿಸಿದರು.
ತಾಲೂಕಿನ ಬೈಲೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನವ, ವನ್ಯಜೀವಿ ಸಂಘರ್ಷ ತಡೆ ಹಾಗೂ ರೈತರ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಯನ್ನು ಆಲಿಸಿ ಮಾತನಾಡಿದರು. ಅರಣ್ಯ ಹಾಗೂ ವನ್ಯಜೀವಿಗಳು ಮನುಕುಲದ ಸಂಪತ್ತು. ಆದ್ದರಿಂದ ಇದರ ಸಂರಕ್ಷಣೆ ಎಲ್ಲರ ಕರ್ತವ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ, ಸೋಲಾರ್ ತಂತಿ ಬೇಲಿ ವ್ಯವಸ್ಥೆಗೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಈ ಭಾಗದಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆಗಳನ್ನು ಸಧ್ಯದಲ್ಲೇ ಸೆರೆ ಹಿಡಿಯಲಾಗುವುದು. ಬೆಳೆನಷ್ಟಕ್ಕೆ ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ರೈತರು ಮಾತನಾಡಿ, ಈ ಭಾಗದಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಜಮೀನಿಗೆ ನುಗ್ಗಿ ಫಸಲನ್ನು ನಾಶಪಡಿಸುತ್ತಿದೆ. ಇದರಿಂದ ರೈತರು ತುಂಬಾ ಸಮಸ್ಯೆಯನ್ನು ಎದುರಿಸುವಂತಾಗಿದೆ. ಹಾಗಾಗಿ ಕಾಡಾನೆಯದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು ಬೆಳೆನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕುತ್ತಿಲ್ಲ. ಆದ್ದರಿಂದ ಕಾಡಾನೆಯನ್ನು ಸೆರೆ ಹಿಡಿಯುವದರ ಜತೆಗೆ ಕಾಡು ಪ್ರಾಣಿಗಳು ಗ್ರಾಮಗಳತ್ತ ಆಗಮಿಸದಂತೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಸಿಎಫ್ ಭಾಸ್ಕರ್, ಆರ್‌ಎಫ್‌ಗಳಾದ ಪ್ರಮೋದ್, ವಾಸು, ಇನ್ಸ್‌ಪೆಕ್ಟರ್ ಆನಂದಮೂರ್ತಿ ಹಾಗೂ ಇತರರಿದ್ದರು.