ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಮೇಲುಕಾಮನಹಳ್ಳಿ ಕಚೇರಿ ಎದುರು ಪ್ರತಿಭಟನೆ
ಗುಂಡ್ಲುಪೇಟೆ: ರೈತರ ಜಮೀನುಗಳಿಗೆ ಎನ್‌ಒಸಿ ನೀಡುವಂತೆ ಆಗ್ರಹಿಸಿ ರೈತ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಎದುರು ನಡೆಯುತ್ತಿರುವ ಧರಣಿ 24ನೇ ದಿನ ಪೂರೈಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿಯ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಹೋಂಸ್ಟೇ ಹಾಗೂ ರೆಸಾರ್ಟ್‌ಗಳ ನಿರ್ಮಾಣಕ್ಕೆ ಪರವಾನಗಿ ಮತ್ತು ಎನ್‌ಒಸಿ ನೀಡುವ ಸಂದರ್ಭದಲ್ಲಿ ತೋರುವ ಮುತುವರ್ಜಿ ರೈತರ ವಿಚಾರದಲ್ಲಿ ಕಾಣಿಸುತ್ತಿಲ್ಲ. ವಿಲಾಸಿ ಜೀವನಕ್ಕಾಗಿ ರೆಸಾರ್ಟ್‌ಗಳನ್ನು ನಿರ್ಮಿಸಲು ಮುಂದಾಗುವ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು, ಬಡ ರೈತರ ಜಮೀನುಗಳನ್ನು ಪರಭಾರೆ ಮಾಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸಫಾರಿ ಸೇರಿದಂತೆ ಪ್ರವಾಸೋದ್ಯಮದ ವಿಚಾರದಲ್ಲಿ ತೋರುವ ಆಸಕ್ತಿ ರೈತರ ಬದುಕಿನ ವಿಚಾರದಲ್ಲಿ ಕಾಣಿಸುತ್ತಿಲ್ಲ. ಸಫಾರಿಯ ಹಣ ದಾಹಕ್ಕೆ ಬಡ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು.
ಬಂಡೀಪುರ ಅರಣ್ಯ ಪ್ರದೇಶದ ಸುತ್ತಮುತ್ತ ಹುಲಿ ಹಾಗೂ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಬಡಗಲಪುರ ಹಾಗೂ ಕೋಟೆಕೆರೆ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿಗೆ ಇಬ್ಬರು ರೈತರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಸುರಕ್ಷತೆ ಹಾಗೂ ಜೀವನೋಪಾಯದ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ನಡುವೆ ಧರಣಿ ಸ್ಥಳಕ್ಕೆ ಡಿಸಿಎಫ್(ಉಪ ಅರಣ್ಯ ಸಂರಕ್ಷಣಾಧಿಕಾರಿ) ಆಗಮಿಸಿ ರೈತರೊಂದಿಗೆ ಚರ್ಚಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಸತೀಶ್ ಅಕ್ಟೊಬರ್ 10ರ ಒಳಗೆ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಬಳಿಕ 25 ದಿನಗಳ ಗಡುವು ನೀಡಿದ ಧರಣಿ ನಿರತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಕೈ ಬಿಟ್ಟರು.
ರೈತ ಸಂಘ ತಾಲೂಕು ಅಧ್ಯಕ್ಷ ಶಿವಣ್ಣ ಮಲ್ಲಯ್ಯನಪುರ, ಯುವಘಟಕ ಅಧ್ಯಕ್ಷ ಪ್ರವೀಣ್, ಪ್ರಸಾದ್ ಇತರರು ಇದ್ದರು.