ಹನೂರಿನಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ರಮೇಶ್, ಉದ್ದನೂರು ಪ್ರಸಾದ್, ಸೋಮಶೇಖರ್, ಮುರುಡೇಶ್ವರಸ್ವಾಮಿ, ಬಸವರಾಜಪ್ಪ ಇತರರಿದ್ದರು. 
ಚಾಮರಾಜನಗರ

ಮಹನೀಯರ ತತ್ವ, ಆದರ್ಶಗಳನ್ನು ಪಾಲಿಸಿ

ಪ್ರಮುಖ ಮುಖ್ಯಾಂಶಗಳು

  • ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಹೇಳಿಕೆ
  • ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ
ಹನೂರು: ಸಮಾಜದ ಒಳಿತಿಗಾಗಿ ದುಡಿದ ಮಹನೀಯರ ತತ್ವ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ ಎಂದು ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಲಿಂಗಾಯತ ಧರ್ಮ ಸ್ಥಾಪಕರಾದ ರೇಣುಕಾಚಾರ್ಯರು ಶೈವ ಸಿದ್ಧಾಂತವನ್ನು ಪ್ರತಿಪಾದಿಸುವುದರ ಮೂಲಕ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ಅನುಭವದ ಮೂಲಕ ಒಳಿಸಿಕೊಳ್ಳಬಹುದು ಎಂದು ಪ್ರಚಾರ ಮಾಡಿದ್ದರು. ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಮಾನವ ಜನ್ಮಕ್ಕೆ ಜಯವಾಗಲಿ. ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ಸಾರಿದ್ದರು ಎಂದರು.
ತತ್ವಶಾಸ್ತ್ರ ಹಾಗೂ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದರು. ಹಾಗಾಗಿ ಇವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕ. ಈ ದೆಸೆಯಲ್ಲಿ ಧಾರ್ಮಿಕತೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕಾದದ್ದು, ಪಾಶ್ಚಿಮಾತ್ಯ ಶೈಲಿಗೆ ಜನರು ಮಾರು ಹೋಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಅಗತ್ಯವೂ ಅನಿವಾರ್ಯವೂ ಆಗಿದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್ ಮಾತನಾಡಿ, ರೇಣುಕಾಚಾರ್ಯರ ತತ್ವಗಳು ಸಮಾಜದ ಸಮಾನತೆ, ಧಾರ್ಮಿಕ ಸಾಮರಸ್ಯ ಹಾಗೂ ಆಧ್ಯಾತ್ಮಕ ಪ್ರಗತಿಗೆ ದಾರಿದೀಪವಾಗಿದೆ. ಈ ದೆಸೆಯಲ್ಲಿ ಸರ್ಕಾರದ ವತಿಯಿಂದ ಇವರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ರೇಣುಕಾಚಾರ್ಯರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ರಮೇಶ್, ಶಿರಸ್ತೆದಾರ್ ಮಾದೇಶ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕರಾದ ಬಸವರಾಜಪ್ಪ, ತಾಲೂಕು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕುಮಾರ್, ನಿರ್ದೇಶಕರಾದ ಜಗದೀಶ್, ಜಡೇಸ್ವಾಮಿ, ಮುಖಂಡರಾದ ಶಾಗ್ಯ ರವಿ, ಮೋಹನ್, ಮಾದೇಶ್, ನಾಗೇಂದ್ರ, ಪ್ರಕಾಶ್ ಇತರರಿದ್ದರು.