ಚಾಮರಾಜನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಜಾನಪದ ಉತ್ಸವ ಹಾಗೂ ಶ್ರೀಪ್ರಭುರಾಜೇ ಅರಸ್ ಜಾನಪದ ಪರಂಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭದ ವಿಚಾರ ಸಂಕಿರಣದಲ್ಲಿ ಮೈಸೂರು ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಮಾತನಾಡಿದರು. ಡಾ. ಪಿ. ಮಣಿ, ಪ್ರೊ.ಎ ಎಂ.ಶಿವಸ್ವಾಮಿ, ಡಾ.ಮಹೇಶ್ ಚಿಕ್ಕಲ್ಲೂರು, ಡಾ.ಶಿವರಾಜು ಬೂದಿತಿಟ್ಟು ಕೆ.ಎಂ.ಲಕ್ಷ್ಮಮ್ಮ, ಪುಷ್ಪ ಬೆಂಡರವಾಡಿ, ಸಿ.ಎಂ.ನರಸಿಂಹಮೂರ್ತಿ ಇದ್ದರು. 
ಚಾಮರಾಜನಗರ

ಜೀವನ ಮೌಲ್ಯ ಜೀವಂತವಾಗಿಟ್ಟಿರುವುದೇ ಜಾನಪದ

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಅಭಿಮತ
  • ಜಿಲ್ಲಾ ಜಾನಪದ ಉತ್ಸವದ ವಿಚಾರ ಸಂಕಿರಣದಲ್ಲಿ ವಿಷಯ ಮಂಡನೆ
ಚಾಮರಾಜನಗರ : ಆಧುನಿಕ ಜೀವನಶೈಲಿ ಮತ್ತು ಯಾಂತ್ರಿಕ ಬದುಕಿನಲ್ಲಿ ಕಳೆದು ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಜನಪದ ಸಾಹಿತ್ಯ ಮತ್ತು ಕಲೆಗಳು ಇಂದಿಗೂ ಜೀವಂತವಾಗಿರಿಸಿವೆ . ಮುಂದಿನ ತಲೆಮಾರಿಗೆ ನಮ್ಮ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮೈಸೂರು ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಹೇಳಿದರು.
ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಜಾನಪದ ಉತ್ಸವ ಹಾಗೂ ಶ್ರೀಪ್ರಭುರಾಜೇ ಅರಸ್ ಜಾನಪದ ಪರಂಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭದ ವಿಚಾರ ಸಂಕಿರಣದಲ್ಲಿ ಸಮಕಾಲಿನ ಸಂದರ್ಭದಲ್ಲಿ ಜಾನಪದದ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಸಮಕಾಲೀನ ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಜಾನಪದವು ಕೇವಲ ಹಳೆಯ ಕಥೆಯಾಗಿ ಉಳಿದಿಲ್ಲ. ಬದಲಾಗಿ ಅದು ಆಧುನಿಕತೆ ಒತ್ತಡದಲ್ಲಿರುವ ಜನರಿಗೆ ಸಾಂಸ್ಕೃತಿಕ ನೆಮ್ಮದಿಯನ್ನು ನೀಡುತ್ತಿದೆ ಎಂದು
‘ಜಿಲ್ಲೆಯ ಜಾನಪದ ಕಲೆಗಳ ವೈಶಿಷ್ಟ್ಯತೆಗಳ’ ಎಂಬ ವಿಷಯದ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ಮಣಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು ಇಲ್ಲಿ ಮನೆಗೊಬ್ಬ ಕಲಾವಿದನಿದ್ದಾನೆ ಕರ್ನಾಟಕದ ಇತರೆ ಭಾಗಗಳಲ್ಲಿ ಕಾಣದ ಹಲವು ಜಾನಪದ ಕಲಾ ಪ್ರಕಾರಗಳು ಇಲ್ಲಿವೆ. ಇಲ್ಲಿನ ಅರಣ್ಯ ಪ್ರದೇಶ ಬೆಟ್ಟ ಗುಡ್ಡಗಳು ಆದಿವಾಸಿ ಜೀವನಶೈಲಿ ಹಾಡುಗಳು ಪ್ರತಿಪಲಿಸುತ್ತಿವೆ ಇಲ್ಲಿ ಮಲೆ ಮಹದೇಶ್ವರ ಮಂಟೇಸ್ವಾಮಿ ಬಿಳಿಗಿರಿ ರಂಗನಾಥ ಸ್ವಾಮಿ ಎಂಬ ಮೂವರು ಸಾಂಸ್ಕೃತಿಕ ನಾಯಕರ ಭಕ್ತರು ತಮ್ಮದೇ ಆದ ನೃತ್ಯ ಸಂಗೀತ ಮತ್ತು ಆಚರಣೆಗಳನ್ನು ಉಳಿಸಿ ಬೆಳೆಸಿದ್ದಾರೆ ಇಲ್ಲಿನ ಕಲೆಗಳು, ಜನಜೀವನ ಭಕ್ತಿ, ಸಮಾನತೆ ಜನಪರ ಪರಂಪರೆಯ ಸುಂದರ ಸಂಗಮವಾಗಿದೆ ಎಂದು ಹೇಳಿದರು.
ರಂಗವಾಹಿನಿ ಜಾನಪದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ ಎಂ.ಶಿವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಸಂಶೋಧಕರಾದ ಡಾ.ಮಹೇಶ್ ಚಿಕ್ಕಲ್ಲೂರು, ಡಾ.ಶಿವರಾಜು ಬೂದಿತಿಟ್ಟು ಕೆ.ಎಂ.ಲಕ್ಷ್ಮಮ್ಮ, ಪುಷ್ಪ ಬೆಂಡರವಾಡಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಂ ನರಸಿಂಹಮೂರ್ತಿ, ಶಿಕ್ಷಕಿ ತಾರಾಪ್ರಿಯ ದರ್ಶಿನಿ ಇದ್ದರು.