ಹನೂರಿನ ರಾಮಾಪುರ ಭಾಗದ ರೈತರು ಜಾನುವಾರುಗಳಿಗಾಗಿ ಖರೀದಿಸಿದ ಮೇವನ್ನು ಟ್ಯ್ರಾಕ್ಟರ್ ಮೂಲಕ ಕೊಂಡೊಯ್ಯುತ್ತಿರುವುದು. 
ಚಾಮರಾಜನಗರ

ರೈತರಿಂದ ಮೇವು ದಾಸ್ತಾನು

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಿಂದ ಹನೂರು ತಾಲೂಕಿನಲ್ಲಿ ಸಮಸ್ಯೆ ತಲೆದೋರುವ ಹಿನ್ನೆಲೆ
ಹನೂರು: ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ರೈತರು ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಮೇವು ಖರೀದಿಸಿ ದಾಸ್ತಾನಿಗೆ ಮುಂದಾಗಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಒಂದು ಸಾವಿರ ಅಡಿ ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಪರತಪಿಸುತ್ತಿದ್ದಾರೆ. ಕೆಲವು ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದ್ದರೆ, ಇನ್ನೂ ಕೆಲವು ಗ್ರಾಮಗಳಲ್ಲಿ ಖಾಸಗಿ ಜಮೀನಿನ ಪಂಪ್‌ಸೆಟ್‌ಗಳಿಂದ ನೀರೊದಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಾಗದ ಪರಿಣಾಮ ಬಿಸಿಲಿನ ತಾಪಕ್ಕೆ ಬಹುತೇಕ ಕೆರೆ-ಕಟ್ಟೆಗಳು ಹಾಗೂ ಹಳ್ಳಕೊಳ್ಳಗಳು ಬತ್ತಿ ಹೋಗಿವೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವದ ಜತೆಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಮೇವನ್ನು ಖರೀದಿಸಿ ದಾಸ್ತಾನು ಇರಿಸಿಕೊಳ್ಳುವ ಸ್ಥಿತಿ ಎದುರಾಗಿದೆ.
ಹೈನುಗಾರಿಕೆ ಅವಲಂಬನೆ: ತಾಲೂಕಿನಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹಾಗಾಗಿ ಪ್ರಸ್ತುತ ಜಿಲ್ಲೆಯಲ್ಲಿಯೇ ಹನೂರು ತಾಲೂಕು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಬಾರಿ ಮಳೆಯಾಗದ ಪರಿಣಾಮ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ತಲೆದೋರಲಿದೆ. ಇದು ಹಾಲು ಉತ್ಪಾದನೆಯ ಪ್ರಮಾಣದ ಮೇಲೂ ಪರಿಣಾಮ ಬೀರಲಿದೆ. ತಾಲೂಕಿನಲ್ಲಿ ಮುಖ್ಯವಾಗಿ ಸುಮಾರು 60 ಸಾವಿರಕ್ಕೂ ಹೆಚ್ಚು ಹಸುಗಳು, 21 ಸಾವಿರಕ್ಕೂ ಎಮ್ಮೆಗಳಿವೆ. ಕೃಷಿ ನೀರಾವರಿ ಹೊಂದಿರುವ ರೈತರು ಜಮೀನುಗಳಲ್ಲೇ ಜಾನುವಾರುಗಳಿಗೆ ಮೇವನ್ನು ಪೂರೈಸುತ್ತಿದ್ದರು. ಇತ್ತ ಖುಷ್ಕಿ ಭೂಮಿಯನ್ನು ಹೊಂದಿರುವ ರೈತರು ಹಾಗೂ ಜಾನುವಾರು ಸಾಕಾಣೆದಾರರು ಅರಣ್ಯದಂಚು, ಜಮೀನು ಆಸುಪಾಸು, ಗ್ರಾಮ ಸಮೀಪ ಹಾಗೂ ಮೇವಿರುವೆಡೆ ಜಾನುವಾರುಗಳನ್ನು ಮೇಯಲು ಬಿಡುತ್ತಿದ್ದರು. ಆದರೆ ಈ ಬಾರಿ ಮಳೆಯಾಗದ ಪರಿಣಾಮ ಮೇವಿನ ಸಮಸ್ಯೆ ಎದುರಾಗಲಿದೆ ಎಂಬುದನ್ನು ಅರಿತ ರೈತರು ಇತರೆಡೆಯಿಂದ 1 ಟ್ರಾಕ್ಟರ್ ಮುಸುಕಿನ ಜೋಳದ ಕಡ್ಡಿ ಮೇವಿಗೆ 10 ಸಾವಿರ ರೂ ನೀಡಿ ದಾಸ್ತಾನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಕಳೆದ 10 ದಿನಗಳಿಂದಲೂ ಹನೂರು ಭಾಗದಲ್ಲಿ ಟ್ರಾಕ್ಟರ್ ಮೂಲಕ ಮೇವನ್ನು ಕೊಂಡೊಯ್ಯುತ್ತಿರುವ ಚಿತ್ರಣ ಕಾಣ ಸಿಗುತ್ತಿದೆ.
1,600 ಟನ್ ಮೇವು ವಿತರಣೆ: ತಾಲೂಕಿನಲ್ಲಿ ಕಳೆದ ವರ್ಷ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಮೇವಿನ ಸಮಸ್ಯೆ ತಲೆದೂರುವ ಸಾಧ್ಯತೆ ಇದೆ. 2024ರಲ್ಲಿ ತಾಲೂಕಿನಲ್ಲಿ ಬರಗಾಲದ ವೇಳೆ ಜಾನುವಾರುಗಳ ಮೇವಿಗೆ ತೀವ್ರ ಸಮಸ್ಯೆಯಾಗಿತ್ತು.. ಮೇವನ್ನು ಒದಗಿಸುವಂತೆ ರೈತರಿಂದ ತೀವ್ರ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನಲೆ ಜಿಲ್ಲಾಡಳಿತ ತಾಲೂಕಿನಲ್ಲಿ 4 ಕಡೆ ಮೇವು ಬ್ಯಾಂಕ್, 17 ಗೋ ಶಾಲೆಗಳನ್ನು ತೆರೆಯುವುದರ ಮೂಲಕ 1,600 ಟನ್ ಮೇವನ್ನು ವಿತರಿಸಲಾಗಿತ್ತು. ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದರು.