ಆಷಾಢ ಮಾಸದ ಮೊದಲನೇ ಶುಕ್ರವಾರ ಹಿನ್ನೆಲೆ ಶ್ರೀ ಮಹಾಲಕ್ಷ್ಮೀಗೆ ವಿವಿಧ ಹೂಗಳಿಂದ ಅಲಂಕರಿಸಿರುವುದು.
ಕೊಳ್ಳೇಗಾಲ: ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯದಲ್ಲಿ ಆಷಾಢ ಮಾಸದ ಮೊದಲನೇ ಶುಕ್ರವಾರ ಪ್ರಯುಕ್ತ ವಿಶೇಷ ಪೂಜೆ ಕೈಂಕರ್ಯ ನಡೆಯಿತು.
ಮುಂಜಾನೆಯಿಂದಲೇ ದೇವಾಲಯದಲ್ಲಿರುವ ಶ್ರೀ ಸೌಮ್ಯ ಲಕ್ಷ್ಮೀ ಅಮ್ಮನವರಿಗೆ ಪಂಚಾಮೃತಾಭಿಷೇಕ, ನೈವೇದ್ಯ, ಮಹಾಮಂಗಳಾರತಿ ನೆರವೇರಿತು. ಬಳಿಕ ಲಕ್ಷ್ಮೀ ದೇವಿಗೆ ವಿವಿಧ ಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ನೆರೆದಿದ್ದ ಭಕ್ತರು ಬೆಲ್ಲದ ಆರತಿ ಮತ್ತು ನಿಂಬೆ ಹಣ್ಣಿನ ಆರತಿಯನ್ನು ದೇವಿಗೆ ಬೆಳಗಿ ಭಕ್ತಿ ಮೆರೆದರು.
ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ಮಹಿಳೆಯರು ಶ್ರೀ ಲಕ್ಷ್ಮೀ ಅಮ್ಮನವರ ದೇವಾಲಯ ಬಳಿ ಲಲಿತಾ ಸಹಸ್ರನಾಮ ಮತ್ತು ಲಕ್ಷ್ಮೀ ಸಹಸ್ರನಾಮ ಪಾರಾಯಣ ಮಾಡಿದರು. ದೇವಾಲಯದ ಎಲ್ಲ ಪೂಜೆ ಕೈಂಕರ್ಯಗಳು ಶೇಷಾದ್ರಿ ಭಟ್, ಸುದರ್ಶನ್ ಭಟ್ ಅವರ ನೇತೃತ್ವದಲ್ಲಿ ಜರುಗಿತು. ಆಷಾಢ ಹಿನ್ನೆಲೆ ದೇವಾಲಯವನ್ನು ತಳಿರು, ತೋರಣದಿಂದ ಶೃಂಗರಿಸಲಾಗಿತ್ತು.