ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಗುರುವಾರ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವುದು. 
ಚಾಮರಾಜನಗರ

ಕಾರು ಡಿಕ್ಕಿಯಾಗಿ ಐದು ಕುರಿ ಮರಿಗಳು ಸಾವು

ಎಂ.ರವಿ
ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಗುರುವಾರ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಿಣಾಮ ಐದು ಕುರಿ ಮರಿಗಳು ಮೃತಪಟ್ಟಿವೆ.
ಮಧುವನಹಳ್ಳಿಯ ಅರವನಪುರದ ದೊಡ್ಡ ಬೋರಮ್ಮ ಎಂಬುವರು ಅವರು ಕುರಿ ಮರಿಗಳನ್ನು ಮೇಯಿಸಲು ಬೈಪಾಸ್ ರಸ್ತೆಯ ಬದಿಯಲ್ಲಿರುವ ಜಮೀನು ಪ್ರದೇಶಕ್ಕೆ ಕರೆದೊಯ್ದಿದ್ದರು. ಜಮೀನಿನಲ್ಲಿ ಮೇವು ತಿನ್ನುತ್ತಿದ್ದ ಕುರಿ ಮರಿಗಳು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಕೆರೆ ಸ್ಥಳಕ್ಕೆ ಹೋಗುವಾಗ ಹನೂರು ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಐದು ಕುರಿ ಮರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಕೃತ್ಯವೆಸಗಿದ ಚಾಲಕ ಕಾರನ್ನು ನಿಲ್ಲಿಸದೆ ತೆರಳಿದ್ದಾನೆ.
ಈ ಬಗ್ಗೆ ಕುರಿ ಮರಿಯ ಮಾಲೀಕರಾದ ಬೋರಮ್ಮ ಜೀವನಕ್ಕೆ ಆಸರೆಯಾಗಿದ್ದ ಕುರಿ ಮರಿಗಳು ಕಾರು ಡಿಕ್ಕಿಯಾಗಿದ್ದರಿಂದ ಮೃತಪಟ್ಟಿವೆ. ಕೂಗಿಕೊಂಡರೂ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾದ ಎಂದು ಅಳಲು ವ್ಯಕ್ತಪಡಿಸಿದರು. ಆ್ಯಂಬುಲೆನ್ಸ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಮಧುಕುಮಾರ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ವೃದ್ಧೆಗೆ ಸಾಂತ್ವನ ಹೇಳಿದರು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.