ಹನೂರಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಸುವಿನ ಮಾಲೀಕ ಪತ್ತಿನಾಥನ್ ಅವರಿಗೆ ಶಾಸಕ ಎಂ.ಆರ್ ಮಂಜುನಾಥ್ ಬಹುಮಾನ ವಿತರಿಸಿದರು. ನಂಜುಂಡಸ್ವಾಮಿ, ಉದ್ದನೂರು ಪ್ರಸಾದ್, ಶಾಹುಲ್ ಆಹಮದ್, ಡಾ. ಸಿದ್ದರಾಜು, ಇತರರಿದ್ದರು.  
ಚಾಮರಾಜನಗರ

33.65 ಕೆಜಿ ಹಾಲು ನೀಡಿದ ಹಸುವಿಗೆ ಪ್ರಥಮ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
  • ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
  • ಚಾಮುಲ್
  • ಹಸುಗಳಿಂದ ಅಧಿಕ ಹಾಲು ಕರೆಯುವ ತಾಲೂಕು ಮಟ್ಟದ ಸ್ಪರ್ಧೆ
ಹನೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಆರ್‌ಎಂಸಿ) ಆವರಣದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಚಾಮುಲ್ ವತಿಯಿಂದ ಆಯೋಜಿಸಿದ್ದ ಹಸುಗಳಿಂದ ಅಧಿಕ ಹಾಲು ಕರೆಯುವ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ತೊಮಿಯಾರ್‌ಪಾಳ್ಯ ಗ್ರಾಮದ ಪತ್ತಿನಾಥನ್ ಅವರ ಹಸು 33.65 ಕೆಜಿ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿತು.
ಸ್ಪರ್ಧೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ 13 ರೈತರು ಹಸುಗಳನ್ನು ಕರೆ ತಂದಿದ್ದರು. ಬೆಳಗ್ಗೆ ಹಾಗೂ ಸಂಜೆ ಕರೆದ ಹಾಲನ್ನು ತೂಕ ಮಾಡಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಪತ್ತಿನಾಥನ್ ಅವರ ಹಸು ಬೆಳಗ್ಗೆ 18. 03 ಕೆ.ಜಿ ಹಾಗೂ ಸಂಜೆ 15. 62 ಕೆ.ಜಿ ಹಾಲು ನೀಡಿದ್ದು, ಪ್ರಥಮ ಸ್ಥಾನ ಪಡೆಯುವುದರ ಮೂಲಕ ಪತ್ತಿನಾಥನ್ 25 ಸಾವಿರ ರೂ. ತಮ್ಮದಾಗಿಸಿಕೊಂಡರು.
ನಂಜೇಡೆಯರದೊಡ್ಡಿ ಗ್ರಾಮದ ಶಿವಮೂರ್ತಿ ಅವರ ಹಸು ಬೆಳಗ್ಗೆ ಹಾಗೂ ಸಂಜೆ ಕ್ರಮವಾಗಿ 18.69 ಕೆ.ಜಿ ಹಾಗೂ 13.89 ಕೆ.ಜಿ ಸೇರಿದಂತೆ 32.58 ಕೆ.ಜಿ ಹಾಲನ್ನು ನೀಡಿದ್ದು, ಮಾಲೀಕ ದ್ವಿತೀಯ ಬಹುಮಾನವಾಗಿ 19 ಸಾವಿರ ರೂ. ಪಡೆದುಕೊಂಡರು. ಇನ್ನು ಬಿ. ಗುಂಡಾಪುರ ಗ್ರಾಮದ ಆನಂದ್‌ಕುಮಾರ್ ಎಂಬುವರ ಹಸು ಬೆಳಗ್ಗೆ 14.83 ಕೆ.ಜಿ ಹಾಗೂ ಸಂಜೆ 15.15 ಕೆ.ಜಿ ಸೇರಿದಂತೆ 29.98 ಕೆಜಿ ಹಾಲು ನೀಡುವುದರ ಮೂಲಕ ತೃತೀಯ ಸ್ಥಾನಕ್ಕೆ ಆಯ್ಕೆಯಾಗಿ ಮಾಲೀಕರು 10 ಸಾವಿರ ರೂ. ಬಹುಮಾನ ಪಡೆದರು.
ಮಿಶ್ರತಳಿ ಕರು ಪ್ರದರ್ಶನದಲ್ಲಿ ಹನೂರಿನ ಕುಮಾರ್, ನಂಜೇಒಡೆಯರದೊಡ್ಡಿಯ ಚೇತನ್, ತೊಮಿಯಾರ್‌ಪಾಳ್ಯದ ಪತ್ತಿನಾಧನ್, ಹನೂರಿನ ವೆಂಕಟೇಶ್ ಅವರು ಬಹುಮಾನ ಪಡೆದುಕೊಂಡರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯನ್ನು ಅವಲಂಬಿಸಿರುವುದರ ಪರಿಣಾಮ ನಿತ್ಯ 88 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ಸಂತಸದ ಸಂಗತಿ. ಹಾಲು ಉತ್ಪಾದನೆ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕು. ಆದ್ದರಿಂದ ಯುವಕರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಉದ್ಯೋಗವು ದೊರೆತಂತಾಗುತ್ತದೆ ಎಂದು ತಿಳಿಸಿದರು.
ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಉದ್ದನೂರು ಪ್ರಸಾದ್, ಶಾಹುಲ್ ಆಹಮದ್, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಮಂಜುನಾಥ್, ತಾಲೂಕು ಸಹಾಯಕ ನಿರ್ದೇಶಕ ಡಾ. ಸಿದ್ದರಾಜು, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಕೊಳ್ಳೇಗಾಲದ ಡಾ. ಮುತ್ತುರಾಜ್, ಗುಂಡ್ಲುಪೇಟೆಯ ಡಾ. ಮಾದೇಶ್, ಹೊಸಮಾಲಂಗಿಯ ಡಾ. ಶಿವಕುಮಾರ್, ಚಾಮುಲ್ ವಿಸ್ತರಾಣಾಧಿಕಾರಿಗಳಾದ ವೆಂಕಟೇಶ್, ದೀಪು, ಹನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯದರ್ಶಿ ರವೀಂದ್ರ ಇದ್ದರು.