ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ರೈತ ನಾಯಕರಾದ ಮಹೇಶ್ ಪ್ರಭು, ಸಿದ್ದರಾಜು, ಶಿವಣ್ಣ, ಬೆಟ್ಟೇಗೌಡ, ಸಿದ್ದರಾಜು, ಪಳನಿಸ್ವಾಮಿ, ಮಲ್ಲಣ್ಣ, ಭಾಸ್ಕರ್ ಇತರರು ಹಾಜರಿದ್ದರು.
- ಕ್ವಿಟ್ ಇಂಡಿಯಾ ಹೋರಾಟದ ಸ್ಮರಣಾರ್ಥ ಧರಣಿ
- ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಟ್ಟು ಪೊಲೀಸರು
ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗೆ ನಗರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಜೈಲು ಚಲೋ ಚಳವಳಿ ನಡೆಯಿತು.
ನಗರದ ಜನನ ಮಂಪಟದ ಬಳಿ ಇರುವ ಸಂಘದ ಕಚೇರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ವಿದೇಶಿ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ವಿದೇಶಿ ಕಂಪನಿಗಳು ದೇಶ ಬಿಟ್ಟು ತೊಲಗಬೇಕು, ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗಬೇಕೆಂದು ಆಗ್ರಹಿಸಿ ಅರ್ಧ ತಾಸಿಗೂ ಅಧಿಕ ಕಾಲ ರಸ್ತೆ ತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ಸಿಕ್ಕು ಉಂಟಾದ ಹಿನ್ನೆಲೆ 20ಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ರೈತ ಸಂಘದ ಕಚೇರಿ ಬಳಿ ಇಳಿಸಿ ಹೋದರು.
ಈ ವೇಳೆ ರೈತ ನಾಯಕ ಮಹೇಶ್ ಪ್ರಭು ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಗಲಿ ಎಂದು ಹೇಳಿದಂತೆ ಪ್ರಸ್ತುತ ವಿದೇಶಿ ಕಂಪನಿಗಳು ಭಾರತವನ್ನು ಬಿಟ್ಟು ತೊಗಲಿ ಎಂದು ೋಷಣೆ ಕೂಗುತ್ತೇವೆ. ಅಂದು ಬ್ರಿಟೀಷರು ಭಾರತೀಯರ ಮೇಲೆ ಸುಂಕ ವಿಧಿಸಿದ ರೀತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಸುಂಕ ವಿಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಿಂದ ವಿದೇಶಿ ಕಂಪನಿಗಳನ್ನು ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಕಂಪನಿಗಳಿಗೆ ಪೂರಕವಾಗಿ ವರ್ತನೆಮಾಡಬಾರದು. ದೇಶದ ನಾಗರಿಕರ ಪರವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಿವಪುರ ಮಹದೇವು, ಜ್ಯೋತಿಗೌಡನಪುರ ಸಿದ್ದರಾಜು, ಹನೂರು ಪಳನಿಸ್ವಾಮಿ, ಚಾಮರಾಜನಗರ ಮಲ್ಲಣ್ಣ, ಭಾಸ್ಕರ್, ಜಯಣ್ಣ, ಮಹೇಶ್ ಮೂಡ್ನಾಕೂಡು, ಕೆರೆಹಳ್ಳಿ ಮಹೇಶ್, ಬೆಟ್ಟೇಗೌಡ, ಕುಮಾರ್, ಶಿವಣ್ಣ ಇತರರು ಪಾಲ್ಗೊಂಡಿದ್ದರು.