ವಡಕೆಹಳ್ಳದಲ್ಲಿ ರೈತರು ಅಹೋರಾತ್ರಿ ಧರಣಿ ಕೈಗೊಂಡಿರುವ ಸ್ಥಳಕ್ಕೆ ಮಾಜಿ ಶಾಸಕ ಆರ್.ನರೇಂದ್ರ ತೆರಳಿ ಮನವಿ ಆಲಿಸಿದರು. ಶೈಲೇಂದ್ರ, ಅರ್ಪುದರಾಜ್, ಸೂಸೈರಾಜ್ ಇತರರಿದ್ದರು.
ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ತಾಲೂಕಿನ ವಡಕೆಹಳ್ಳದಲ್ಲಿ ರೈತರು 104 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶುಕ್ರವಾರ ಮಾಜಿ ಶಾಸಕ ಆರ್.ನರೇಂದ್ರ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ವೇಳೆ ಆರ್.ನರೇಂದ್ರ ಮಾತನಾಡಿ, ಹಿಂದೆ ಶಾಸಕನಾಗಿದ್ದ ವೇಳೆ ಕ್ಷೇತ್ರದ ಗುಂಡಾಲ್ ಜಲಾಶಯ, ಹುಬ್ಬೆಹುಣಸೆ ಹಾಗೂ ರಾಮನಗುಡ್ಡೆ ಕೆರೆಗೆ ನೀರು ತುಂಬಿಸಲು 132 ಕೋಟಿ ರೂ.ಅನುದಾನ ತರಲಾಗಿತ್ತು. ಉಡುತೊರೆ ಹಳ್ಳ ಜಲಾಶಯಕ್ಕೆ ನೀರು ತುಂಬಿಸಲು 110 ಕೋಟಿ ರೂ.ಅಗತ್ಯತೆ ಇತ್ತು. ಆದರೆ, ಅಂದಿನ ಬಿಜೆಪಿ ಸರ್ಕಾರ ಅನುದಾನ ನೀಡಲಿಲ್ಲ. ಇದರಿಂದ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಇನ್ನು ಮೊದಲನೇ ಹಂತದಲ್ಲಿ 100 ಕೋಟಿ ರೂ.ಅನುದಾನದಲ್ಲಿ 98 ಹಳ್ಳಿಗೆ ಕಾವೇರಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿತ್ತು. 2ನೇ ಹಂತದಲ್ಲಿ 248 ಕೋಟಿ ರೂ.ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು ಎಂದರು.
ಇದೀಗ ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದೀರಾ. ಆದರೆ, ದಂಟಳ್ಳಿ ಮಾರ್ಗವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಮಸ್ಯೆ ಇದೆ. ಸರಗೂರಿನಿಂದ ಗುಂಡಾಲ್ ಜಲಾಶಯದ ಮೂಲಕ ಈ ಭಾಗಕ್ಕೆ ನೀರಾವರಿ ಸೌಕರ್ಯ ಒದಗಿಸಬಹುದು ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಆದ್ದರಿಂದ ರೈತರೆಲ್ಲರೂ ಚರ್ಚಿಸಿ ಸಲಹೆ ನೀಡುವಂತೆ ತಿಳಿಸಿದರು.
ಇದಕ್ಕೆ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಪ್ರತಿಕ್ರಿಯಿಸಿ, ದಂಟಳ್ಳಿ ಮಾರ್ಗವಾಗಿಯೇ ನೀರಾವರಿ ಯೋಜನೆ ರೂಪಿಸಿಬೇಕು. ಇದೀಗ ತಮ್ಮದೇ ಕಾಂಗ್ರೆಸ್ ಸರ್ಕಾರವಿದೆ. ಹಾಗಾಗಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ರೈತ ಮುಖಂಡರಾದ ಅರ್ಪುದ ರಾಜ್, ಜೋಸೆಫ್, ಪೀಟರ್, ಸೂಸೈರಾಜ್, ಮಾಣಿಕ್ಯಂ ಇತರರಿದ್ದರು.