ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕೊಳ್ಳೇಗಾಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯನ್ನು ಕೆಲ ಸಮಯ ತಡೆದು ಪ್ರತಿಭಟಿಸಿದರು. ಗೌಡೇಗೌಡ, ಶಿವಮಲ್ಲು, ರವಿನಾಯ್ಡು ಇತರರು ಇದ್ದರು.
ಕೊಳ್ಳೇಗಾಲ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ರೈತ ಸಂಘ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಾರದ ಹಿನ್ನೆಲೆ ರೊಚ್ಚಿಗೆದ್ದ ರೈತರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
ಪಟ್ಟಣದ ಎಪಿಎಂಸಿ ಆವರಣದಿಂದ ಕಾಲ್ನಡಿಗೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪ್ರತಿಭಟನಾಕರರು ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಹೋರಾಟ ಆರಂಭಿಸಿದರು. ಈ ವೇಳೆ ರೈತ ಮುಖಂಡ ಗೌಡೇಗೌಡ ಮಾತನಾಡಿ, ವಾರದ ಹಿಂದೆಯೇ ಉಪವಿಭಾಗಾಧಿಕಾರಿಗಳಿಗೆ, ಕಂದಾಯ, ಇಂಧನ, ನೀರಾವರಿ, ಅರಣ್ಯ ಇಲಾಖೆಗಳಿಂದ ರೈತರಿಗೆ ಬಹಳ ಸಮಸ್ಯೆಯಿದೆ. ಈ ಸಂಬಂಧ ಮೇ 12ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಿ ಸಮಸ್ಯೆ ಆಲಿಸಬೇಕು ಎಂದು ತಿಳಿಸಲಾಗಿತ್ತು. ಆದರೆ ಕನಿಷ್ಠ ರೈತರ ಸಮಸ್ಯೆಗಳನ್ನು ಕೇಳುವ ವ್ಯವಧಾನ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆಯುತ್ತಿದಂತೆ ಎಂಟ್ರಿ
ರೈತರು ಅಧಿಕಾರಿಗಳ ನಡೆಗೆ ಬೇಸತ್ತು ರಸ್ತೆ ತಡೆದು ಆಕ್ರೋಶ ಹೊರಹಾಕುತ್ತಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನೆಯಲ್ಲಿದ್ದ ರೈತ ಮುಖಂಡ ಗೌಡೇಗೌಡ ಜತೆ ಚರ್ಚಿಸಿದರು. ನಂತರ ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಾದಯ್ಯ ಅವರು ರೈತರನ್ನು ಮನವೊಲಿಸಿ ರಸ್ತೆಯಿಂದ ಮೇಲೆಳಿಸಿ ತಾಲೂಕು ಕಚೇರಿ ಮುಂಭಾಗಕ್ಕೆ ಕರೆದೊಯ್ದರು. ನಂತರ ಬಂದ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆಯಿಸಿ ರೈತರ ಬೇಡಿಕೆಗಳ ಕುರಿತು ಚರ್ಚಿಸಿದರಲ್ಲದೇ, ಮೇ 21ರ ನಂತರ ರೈತರ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಸಮಸ್ಯೆಗಳ ಬಗೆಹರಿಸುವಂತೆ ಹೋರಾಟ:
ಸಾಗುವಳಿ ಚೀಟಿ ನೀಡಿ ಆರ್‌ಟಿಸಿ ನೀಡದಿರುವುದು, ರೈತರು ಜಮೀನುಗಳಿಗೆ ತೆರಳಲು ದಾರಿ ಸಮಸ್ಯೆ, ವಿದ್ಯುತ್ ಸಮಸ್ಯೆ, ತೇಗದ ಮರಗಳ ಕಟಾವಿನ ಸಮಸ್ಯೆ ಸೇರಿದಂತೆ ರೈತರ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು ಆಗ್ರಹಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಶಿವಮಲ್ಲು, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ನಾಗರಾಜು ಅರೇಪಾಳ್ಯ, ಶಿವರಾಮ್, ಅಶೋಕ್, ಶಿವರಾಮ್, ಮಧುವನ ಅರಸ್, ಪರಮೇಶ್ ಸೇರಿದಂತೆ ಮಹಿಳಾ ಹೋರಾಟಗಾರರು ಇದ್ದರು.