ಗುಂಡ್ಲುಪೇಟೆ ತಾಲೂಕಿನ ಬಸವಪುರ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವಮೇಟಿ ಬಣದ ಗ್ರಾಮ ಘಟಕವನ್ನು ಉದ್ಘಾಟಿಸಲಾಯಿತು. ಡಾ.ಗುರುಪ್ರಸಾದ್, ಮಹದೇವಪ್ಪ, ಮಹೇಶ್ ಇತರರು ಇದ್ದರು. 
ಚಾಮರಾಜನಗರ

ರೈತರು ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ

ರೈತ ಸಂಘ-ಹಸಿರು ಸೇವೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಅಭಿಮತ

ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ವಿರುದ್ಧ ರೈತರು ಸಂಘಟಿತ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹೇಳಿದರು.
ತಾಲೂಕಿನ ಬಸವಪುರ ಗ್ರಾಮದಲ್ಲಿ ನೂತನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಗ್ರಾಮ ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷೃ ಮಾಡಿದ್ದು ಸರಿಯಾದ ಅನುದಾನ ನೀಡದೆ ಅನ್ಯಾಯ ಎಸಗಿದೆ. ಈ ನಡುವೆ ರಾಜ್ಯ ಸರ್ಕಾರ ಅತಿಯಾದ ಲಂಚಗುಳಿತನದಿಂದ ರೈತರ ಬದುಕನ್ನು ಬರ್ಬರಗೊಳಿಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವೇ ಕಾಲ್ನಡಿಗೆ ಮೂಲಕ ದೊಡ್ಡ ಪ್ರಚಾರ ಪಡೆದುಕೊಂಡ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವ ಬದ್ಧತೆ ತೋರಿಸಿಲ್ಲ. ಆದ್ದರಿಂದ ಹೆಚ್ಚು ಹೆಚ್ಚು ಯುವರೈತರು ಸಂಘಟನೆ ಮಾಡುವ ಮೂಲಕ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮಾಡ್ರಳ್ಳಿ ಮಹಾದೇವಪ್ಪ ಮಾತನಾಡಿ, ಈಗಾಗಲೇ ಅನೇಕ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿಲ್ಲದಂತಾಗಿದ್ದು ರೈತರು ತೀವ್ರ ಬರಗಾಲದಿಂದ ಸಂಕಷ್ಟ್ಟಕ್ಕಿಡಾಗಿದ್ದಾರೆ. ತಾಲೂಕಿನ ಕೆರೆಗಳಿಗೆ ಆದಷ್ಟು ಬೇಗ ನೀರು ತುಂಬಿಸಲು ಶಾಸಕರು ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಚಳವಳಿಯನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಎಚ್.ಎಂ.ಮಹೇಶ್, ಹಸಿರು ಸೇನೆ ಅಧ್ಯಕ್ಷ ಹಿರೀಕಾಟಿ ಚಿಕ್ಕಣ್ಣ, ಜಿಲ್ಲಾ ಸಂಚಾಲಕ ಮೂರ್ತಿ, ಕಾರ್ಯದರ್ಶಿ ಬೆಟ್ಟಳ್ಳಿಗುರು, ಶಂಭುಲಿಂಗಪ್ಪ, ಸತೀಶ, ಸುರೇಶ, ಸ್ವಾಮಿ, ಮಣಿಕಂಠ, ಪ್ರಸಾದ, ಹಕ್ಕಲಪುರ ಮಹೇಶ, ನಂದೀಶ, ಯೋಗಿ, ಹುಲಗನಾಯಕ, ರವಿ ಹಾಗೂ ಇತರರು ಇದ್ದರು.