ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅಕ್ರಮವಾಗಿ ಗೇಟ್ ಅಳವಡಿಸಿರುವ ಅರಣ್ಯ ಇಲಾಖೆ ವಿರುದ್ಧ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಬೆಟ್ಟದ ತಪ್ಪಲಿನಲ್ಲಿ ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ಅರಣ್ಯ ಇಲಾಖೆ ವಿರುದ್ಧ ರೈತ ಸಂಘ ಪ್ರತಿಭಟನೆ

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅಕ್ರಮವಾಗಿ ಗೇಟ್ ಅಳವಡಿಸಿರುವ ಅರಣ್ಯ ಇಲಾಖೆ ವಿರುದ್ಧ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಬೆಟ್ಟದ ತಪ್ಪಲಿನಲ್ಲಿ ಪ್ರತಿಭಟನೆ ನಡೆಸಿದರು.
ವಾಸುದೇವಮೇಟಿ ನೇತೃತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಮಾತನಾಡಿ, ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ವಹಿಸುತ್ತಿದೆ. ಈ ಬಗ್ಗೆ ಸಂಘವು ರ್ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಂಡಿದ್ದು, ಬೆಟ್ಟದ ಮೇಲಿರುವ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದರೂ ಅರಣ್ಯ ಇಲಾಖೆಯು ಜಿಲ್ಲಾಧಿಕಾರಿಯಾಗಲಿ, ಸರ್ಕಾರದಿಂದಾಗಲಿ ಅನುಮತಿ ಪಡೆಯದೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗೆ ಗೇಟ್ ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ದೇವಾಲಯ ಇರುವ ಪ್ರದೇಶವು ತನಗೆ ಸೇರಿದೆ ಎಂಬ ಕಾರಣದಿಂದ ಅರಣ್ಯ ಇಲಾಖೆ ಅಕ್ರಮವಾಗಿ ಗೇಟ್ ಅಳವಡಿಸಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟ ಹಾಗೂ ಚಾಮುಂಡಿ ಬೆಟ್ಟಗಳು ಅರಣ್ಯ ಇಲಾಖೆಗೆ ಸೇರಿದ್ದರೂ ಅಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಿಸಲಾಗಿದೆ. ಆದರೆ ಇಲ್ಲಿ ಅರಣ್ಯ ಇಲಾಖೆ ತಮ್ಮ ಅರಣ್ಯಕ್ಕೆ ಬೇಲಿ ಹಾಕಿಕೊಳ್ಳುವ ಬದಲು ಸಾರ್ವಜನಿಕರ ಪ್ರವೇಶವನ್ನೇ ನಿರ್ಬಂಧಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜನರು ಹಾಗೂ ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಟ್ಟಕ್ಕೆ ಹೋಗುವ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ನಲ್ಲಿ ಕಳಿಸುವ ಅರಣ್ಯ ಇಲಾಖೆ ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ಬಿಟ್ಟುಕೊಳ್ಳುವ ಮೂಲಕ ಪಕ್ಷಪಾತ ಮಾಡುತ್ತಿದೆ. ಆದ್ದರಿಂದ ಕೂಡಲೇ ಗೇಟ್ ತೆರವುಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ಮುಖಂಡರಾದ ಮಹೇಶ್, ನಾಗೇಶ್, ಮೂರ್ತಿ, ಲೋಕೇಶ್, ಶಿವಪಾದ, ಡಿವೈಎಸ್‌ಪಿ ಸ್ನೇಹಾ ರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಜಯಕುಮಾರ್, ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಬಿ.ಎಂ.ಮಲ್ಲೇಶ್ ಇತರರಿದ್ದರು.